ನವದೆಹಲಿ:
ಕೊರೋನಾ ವೈರಸ್ ಸೋಂಕು ನಿವಾರಣೆಗೆ ದೇಶಾದ್ಯಂತ ಕಳೆದ ಮಾರ್ಚ್ ನಲ್ಲಿ 3 ವಾರಗಳ ಬಿಗಿ ಲಾಕ್ ಡೌನ್ ಘೋಷಿಸಿ ನಂತರ ಹಂತ ಹಂತವಾಗಿ ಸಡಿಲ ಮಾಡುತ್ತಾ ಸರ್ಕಾರ ಬಂದಿತು.
ಇದೀಗ 5 ತಿಂಗಳ ನಂತರ ಬಹುತೇಕ ಚಟುವಟಿಕೆಗಳು ಹಿಂದಿನ ಸಹಜ ಸ್ಥಿತಿಗೆ ಬರುತ್ತಿದ್ದು, ಹಲವು ಸೇವೆಗಳು ಪುನರಾರಂಭ ಗೊಂಡಿವೆ. ದೇಶಾದ್ಯಂತ ಮೆಟ್ರೊ ಸೇವೆ ಸೆಪ್ಟೆಂಬರ್ 7ರಂದು ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ದೆಹಲಿ ಮೆಟ್ರೊ ಮಾರ್ಗಸೂಚಿ ಹೊರಡಿಸಿದೆ.
ಮಾರ್ಗಸೂಚಿಯಲ್ಲಿ ಏನೇನಿದೆ: ಸೆಪ್ಟೆಂಬರ್ 7ರಂದು ಮೆಟ್ರೊ ಸೇವೆ ಪುನರಾರಂಭಗೊಂಡ ನಂತರ ಮೆಟ್ರೊದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್, ಸ್ಮಾರ್ಟ್ ಕಾರ್ಡು ಕಡ್ಡಾಯವಾಗಿರುತ್ತದೆ. ಟೋಕನ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ, ಪ್ರಯಾಣಿಕರು ಹಣ ನೀಡಲು ಸ್ಮಾರ್ಟ್ ಕಾರ್ಡು ಮತ್ತು ಇತರ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಪ್ರತಿ ಬೋಗಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಪ್ರಯಾಣಿಕರಿರುತ್ತಾರೆ.
ಬೋಗಿಗಳ ಒಳಗೆ ಹೊರಗಿನ ಗಾಳಿ ಸಿಗಬೇಕಾಗಿರುವುದರಿಂದ ಹವಾನಿಯಂತ್ರಿತ ವ್ಯವಸ್ಥೆಯನ್ನು ಬಂದ್ ಮಾಡಲಾಗುತ್ತದೆ. ಎಲ್ಲಾ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗುವುದಿಲ್ಲ, ಹಂತ ಹಂತವಾಗಿ ಮೆಟ್ರೊ ಸೇವೆ ಪುನರಾರಂಭವಾಗುತ್ತದೆ.
ಮೆಟ್ರೊ ನಿಲ್ದಾಣಗಳಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅಳವಡಿಸಲಾಗುತ್ತದೆ. ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್ ನ್ನು ಪಾಲಿಸಲಾಗುತ್ತದೆ. ಕೈಗೆ ಸ್ಯಾನಿಟೈಸರ್ ಕೂಡ ಕಡ್ಡಾಯವಾಗಿ ಹಚ್ಚಿಕೊಳ್ಳಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ