ಪಾಟ್ನಾ:
ಬಿಹಾರದಲ್ಲಿ ವಿಧಾನ ಸಭಾ ಚುನಾವಣಾ ಕಣ ದಿನೇದಿನೆ ರಂಗೇರುತ್ತಿದ್ದು ಈ ವೇಳೆಯಲ್ಲಿ ತೇಜಸ್ವಿ ಯಾದವ್ ಮತ್ತು ನಿತೀಶ್ ಕುಮಾರ್ ನಡುವೆ ವಾಕ್ಸಮರ ಮುಂದುವರೆದಿದೆ. ಲಾಲೂ ಪ್ರಸಾದ್ ಯಾದವ್ ಅವರಿಗೆ 8-9 ಮಕ್ಕಳಿದ್ದಾರೆ ಎಂಬ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ತಿರುಗೇಟು ನೀಡಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಪ್ರಧಾನಿ ನರೇಂದ್ರ ಮೋದಿ ಅವರಿಗೂ 6 ಜನ ಒಡಹುಟ್ಟಿದವರಿದ್ದಾರೆ ಎಂದು ಹೇಳಿದ್ದಾರೆ.
ನಿತೀಶ್ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿರುವ ತೇಜಸ್ವಿ ಯಾದವ್, ನನ್ನ ಕುಟುಂಬದ ಬಗ್ಗೆ ಹೇಳಿಕೆ ನೀಡುವ ಮೂಲಕ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರಿಗೂ 6 ಜನ ಒಡಹುಟ್ಟಿದವರಿದ್ದಾರೆ. ಅಂತಹ ಭಾಷೆಯನ್ನು ಬಳಸಿ ನಿತೀಶ್ ಕುಮಾರ್ ಮಹಿಳೆಯರನ್ನು ಮತ್ತು ನನ್ನ ತಾಯಿಯ ಭಾವನೆಗಳನ್ನು ಅವಮಾನಿಸಿದ್ದಾರೆ. ಹಣದುಬ್ಬರ, ಭ್ರಷ್ಟಾಚಾರ, ನಿರುದ್ಯೋಗದಂತಹ ವಿಷಯಗಳ ಬಗ್ಗೆ ಅವರು ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ತೇಜಸ್ವಿ ಯಾದವ್, ನನ್ನ ವಿರುದ್ಧ ನಿತೀಶ್ ಜೀ ಬಳಸುವ ಕೆಟ್ಟ ಪದಗಳನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ. ನಿತೀಶ್ ಕುಮಾರ್ ಮಾನಸಿಕವಾಗಿ ಮತ್ತು ದೈಹಿಕವಾಗಿ ದಣಿದಿದ್ದಾರೆ. ಆದ್ದರಿಂದ ಅವರು ತಮಗೆ ಬೇಕಾದಂತೆ ಮಾತನಾಡುತ್ತಿದ್ದಾರೆ. ಈ ಬಾರಿ ಬಿಹಾರ ಉದ್ಯೋಗ ಮತ್ತು ಅಭಿವೃದ್ಧಿಯ ವಿಷಯಗಳನ್ನು ಆಧರಿಸಿ ಮತ ಚಲಾಯಿಸಲು ನಿರ್ಧರಿಸಿದೆ ಎಂದು ಹೇಳಿದ್ದರು.
ಮೊದಲ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರದ ಕೊನೆದಿನವಾಗಿದ್ದ ಸೋಮವಾರದಂದು ನಿತೀಶ್ ಕುಮಾರ್, ತೇಜಶ್ವಿ ಯಾದವ್ ಮತ್ತು ಅವರ ತಂದೆ ಲಾಲು ಪ್ರಸಾದ್ ಯಾದವ್ ಮೇಲೆ ವಾಗ್ದಾಳಿ ನಡೆಸಿದ್ದರು. ಯಾರಾದರೂ ಗಮನಿಸಿದ್ದೀರಾ..? ಅವರಿಗೆ ಎಂಟು-ಒಂಬತ್ತು ಮಕ್ಕಳಿದ್ದಾರೆ. ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ನಂಬಿಕೆಯಿಲ್ಲ. ಎಷ್ಟೋ ಹೆಣ್ಣುಮಕ್ಕಳ ನಂತರ ಅವರಿಗೆ ಒಬ್ಬ ಮಗ ಹುಟ್ಟಿದ್ದಾನೆ. ಇದನ್ನು ನೀವೆಲ್ಲರೂ ನೋಡಬಹುದು. ಈ ರೀತಿಯ ಬಿಹಾರವನ್ನು ಅವರು ನಿರ್ಮಾಣ ಮಾಡಲು ಹೋಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಸರು ಉಲ್ಲೇಖಿಸದೇ ನಿತೀಶ್ ಕುಮಾರ್ ವಿವಾದಿತ ಹೇಳಿಕೆ ನೀಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
