ನವದೆಹಲಿ:
ನಮ್ಮ ದೇಶದ ಮಟ್ಟಿಗೆ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿಯೇ ಅಗ್ರಗಣ್ಯ ಎನ್ನಿಸಿರುವ ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ)ಯಲ್ಲಿ ಈ ವರ್ಷ ಪ್ರವೇಶಾತಿಗೆ 12ನೇ ತರಗತಿ ಮಾನದಂಡವಾಗುವುದಿಲ್ಲಾ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಮೊದಲು ದೇಶದ ಪ್ರತಿಷ್ಠಿತ ಐಐಟಿ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಬೇಕಾದರೆ ವಿದ್ಯಾರ್ಥಿಗಳು ಜೆಇಇ ತೇರ್ಗಡೆ ಹೊಂದುವುದರ ಜೊತೆಗೆ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 75ರಷ್ಟು ಅಂಕ ಗಳಿಸಿರಬೇಕು ಅಥವಾ ಅರ್ಹತೆ ಪರೀಕ್ಷೆಗಳಲ್ಲಿ ಟಾಪ್ 20 ರ್ಯಾಂಕ್ ಪಡೆದಿರಬೇಕು.ಆದರೆ ಈ ವರ್ಷ 12ನೇ ತರಗತಿಯಲ್ಲಿ ಶೇಕಡಾ 75ರಷ್ಟು ಅಂಕ ಗಳಿಸಿರಬೇಕು ಎಂಬ ಮಾನದಂಡವನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.
ಸಿಬಿಎಸ್ಇ, ಐಸಿಎಸ್ಇ ಮತ್ತು ಸ್ಟೇಟ್ ಬೋರ್ಡ್ ಗಳು ಈ ವರ್ಷ 12ನೇ ತರಗತಿಯ ಕೆಲವು ಪರೀಕ್ಷೆಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದರಿಂದ ಈ ವರ್ಷ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ದರೂ ಕೂಡ ಐಐಟಿ ಪ್ರವೇಶಕ್ಕೆ ಅರ್ಹರು ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಈ ವರ್ಷ ಸೆಪ್ಟೆಂಬರ್1ರಿಂದ 6ರ ಮಧ್ಯದಲ್ಲಿ ಜೆಇಇ ಮುಖ್ಯ ಪರೀಕ್ಷೆ ನಡೆಸಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ದಿನಾಂಕವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಐಐಟಿಗಳ ಪ್ರವೇಶಕ್ಕೆ ಜೆಇಇ(ಸುಧಾರಿತ) ಪರೀಕ್ಷೆ ಸೆಪ್ಟೆಂಬರ್ 27ರಂದು ನಡೆಯಲಿದೆ.
