ನವದೆಹಲಿ:
ದೇಶ ಕಂಡ ಧೀಮಂತ ನಾಯಕ ಹಾಗೂ ರಾಜಕೀಯ ಭೀಷ್ಮ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನದ ಅಂಗವಾಗಿ ಅವರ ಸ್ಮರಣಾರ್ಥ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಸಂಸತ್ ಭವನದಲ್ಲಿ ನಡೆದ ಸಮಾರಂಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ನಾಣ್ಯ ಬಿಡುಗಡೆ ಮಾಡಿದರು. ಅವರ ಆಪ್ತ ವಲಯದಲ್ಲಿ ಸಕ್ರಿಯವಾಗಿದ್ದ ಮೋದಿಯವರಿಗೆ ಈ ನಾಣ್ಯ ಬಿಡುಗಡೆ ಅತ್ಯಂತ ಮಹತ್ವ ಪೂರ್ಣವಾಗಿತ್ತು. ಮತ್ತು ಇದು ನಮ್ಮ ದೇಶ ಅಗಲಿದ ನಾಯಕನಿಗೆ ನೀಡಿದ ಅತಿ ಚಿಕ್ಕದಾದ ಗೌರವವೆಂದು ನುಡಿಯುವ ಮೂಲಕ ತಮ್ಮ ಮನದಲ್ಲಿದ್ದ ತಮ್ಮ ಗುರು ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಈ ನಾಣ್ಯ 135 ಗ್ರಾಂ ತೂಕ ಇದ್ದು ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಚಿತ್ರ ಹಾಗೂ ಅದರ ಕೆಳಗೆ ವಾಜಪೇಯಿ ಅವರ ಹೆಸರು ಮತ್ತು ಜನನ ಹಾಗೂ ಮರಣ ವರ್ಷ (1924-2018) ನಮೂದಿಸಲಾಗಿದೆ. ಮತ್ತೊಂದು ಬದಿಯಲ್ಲಿ ಅಶೋಕ ಸ್ತಂಭದ ಲಾಂಛನದ ಕೆಳಗೆ ಸತ್ಯಮೇವ ಜಯತೆ ಹಾಗೂ ಅದರಡಿ 100 ರೂ. ಎಂದು ಬರೆದಿದೆ. ಒಂದು ಬದಿಯಲ್ಲಿ ಭಾರತ ಹಾಗೂ ಮತ್ತೊಂದು ಬದಿಯಲ್ಲಿ ಇಂಡಿಯಾ ಎಂದು ದೇವನಾಗರಿ ಮತ್ತು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಈ ನಾಣ್ಯವನ್ನು ಬೆಳ್ಳಿ (ಶೇ. 50), ತಾಮ್ರ (ಶೇ. 40), ನಿಕ್ಕಲ್ (ಶೇ.5) ಮತ್ತು ಜಿಂಕ್ (ಶೇ.5) ಲೋಹ ಬಳಸಿ ತಯಾರಿಸಲಾಗಿದೆ.
ವಾಜಪೇಯಿ ಅವರೊಂದಿಗೆ ಧೀರ್ಘ ಕಾಲ ಒಡನಾಟ ಹೊಂದಿದ್ದ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಸ್ಪೀಕರ್ ಸುಮಿತ್ರಾ ಮಹಾಜನ್, ವಿತ್ತ ಸಚಿವ ಅರುಣ್ ಜೇಟ್ಲಿ, ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ