ನವದೆಹಲಿ
ಮಾಯಾವತಿಯವರ ಮೇಲೆ ಚುನಾವಣಾ ಆಯೋಗ ವಿಧಿಸಿದ್ದ 48 ಗಂಟೆಗಳ ಕಾಲದ ಪ್ರಚಾರ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಮಾಯಾವತಿಯವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಾಯಾವತಿಯವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಲಾಗಿತ್ತು.
ಚುನಾವಣಾ ಆಯೋಗ ಹೇರಿದ್ದ ನಿಷೇಧಾಜ್ಞೆ ಹಿಂಪಡೆಯುವಂತೆ ಕೋರಿ ಮಾಯಾವತಿ ಸುಪ್ರೀಂ ಮೆಟ್ಟಿಲೇರಿದ್ದರು. ಮಾಯಾವತಿ ಮನವಿಯನ್ನು ನಿರಾಕರಿಸಿದ ಪೀಠ ಚುನಾವಣಾ ಆಯೋಗದ ನಿರ್ಧಾರ ಸರಿ ಇದೆ ಎಂದು ಹೇಳಿದೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಚೋದನಾ ಕಾರಿ ಭಾಷಣ ಮಾಡುವ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ.
ಈ ಅಧಿಕಾರವನ್ನು ಬಳಸಿಕೊಂಡು ಪ್ರಭಾವಿ ರಾಜಕಾರಣಿಗಳ ವಿರುದ್ಧ ಮೊದಲ ಬಾರಿ ಆಯೋಗ ಕ್ರಮ ಕೈಗೊಂಡಿದೆ. ಇದಕ್ಕಾಗಿ ಆಯೋಗವನ್ನು ಅಭಿನಂದಿಸುತ್ತೇವೆ ಎಂದು ಹೇಳಿ ಮಾಯಾವತಿ ಅರ್ಜಿಯನ್ನು ತಿರಸ್ಕರಿಸಿತು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಸಿಎಂ ಮಾಯಾವತಿ ಪ್ರಚೋದನಕಾರಿ ಭಾಷಣ ಮಾಡಿರುವುದಾಗಿ ಆರೋಪಿಸಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಇದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಅದರಂತೆ ಆಯೋಗವು ಯೋಗಿ ಆದಿತ್ಯನಾಥ್ ಅವರಿಗೆ 72 ಗಂಟೆ ಮತ್ತು ಮಾಯಾವತಿಗೆ 48 ಗಂಟೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧಿಸಿ ಸೋಮವಾರ ಆದೇಶಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ