ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ನಂತರದಲ್ಲಿ ಗೃಹ ಬಂಧನದ ಶಿಕ್ಷೆಗೆ ಗುರಿಯಾಗಿದ್ದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಸರ್ಕಾರ ಇಂದು ಬಿಡುಗಡೆ ಮಾಡಲಿದೆ . ಕಣಿವೆ ರಾಜ್ಯದ ಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನದಲ್ಲಿ ಇರಿಸಲಾಗಿದ್ದ ಎಲ್ಲಾ ರಾಜಕೀಯ ನಾಯಕರನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನನ್ನಲಾಗಿದೆ.
ಅದರಂತೆ ಈಗಾಗಲೇ ಹಿರಿಯ ರಾಜಕಾರಣಿ ಫಾರೂಕ್ ಅಬ್ದುಲ್ಲಾ ಗೃಹ ಬಂಧನದಿಂದ ಬಿಡುಗಡೆ ಹೊಂದಿದ್ದು, ಇಂದು ಅವರ ಪುತ್ರ ಒಮರ್ ಅಬ್ದುಲ್ಲಾ ಅವರಿಗೆ ಗೃಹ ಬಂಧನದಿಂದ ಮುಕ್ತಿ ಸಿಗಲಿದೆ.ಈ ಹಿಂದೆ ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿ, ಒಮರ್ ಸಹೋದರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಸ್ವೀಕರಿಸಿದ್ದ ಸುಪ್ರೀಂಕೋರ್ಟ್, ಈ ಕುರಿತು ಮೆರಿಟ್ ಆಧಾರದ ಮೇಲೆ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಅಲ್ಲದೇ ಒಮರ್ ಅವರನ್ನು ಬಿಡುಗಡೆ ಮಾಡುವ ಮನಸ್ಸಿದ್ದರೆ ಶೀಘ್ರದಲ್ಲೇ ಮಾಡಿ ಎಂದು ಕೇಂದ್ರಕ್ಕೆ ಸೂಚನೆ ಕೂಡ ನೀಡಿತ್ತು.ಇದೀಗ ಒಮರ್ ಅಬ್ದುಲ್ಲಾ ಬಿಡುಗಡೆ ಭಾಗ್ಯ ಕಾಣಲಿದ್ದು, ಇದರ ರಾಜಕೀಯ ಪರಿಣಾಮಗಳ ವಿಶ್ಲೇಷಣೆಗಳು ಈಗಾಗಲೇ ಆರಂಭವಾಗಿವೆ. ಒಮರ್ ಮತ್ತೆ ರಾಜಕೀಯವಾಗಿ ಚುರುಕಾಗುವುದು ನಿಶ್ಚಿತವಾಗಿದ್ದು, ಕಣಿವೆಯ ಮುಂದಿನ ಸ್ಥಿತಿಗತಿ ಕುರಿತು ಭಾರೀ ಕುತೂಹಲ ಮೂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
