ಮುಂಬಯಿ:
ಕಳೆದ 10 ದಿನಗಳಿಂದ ಸತತವಾಗಿ ಏರಿಕೆಯಾಗುತ್ತಲೇ ಸಾಗಿದ್ದ ಬಾಂಬೆ ಷೇರು ಪೇಟೆ ಸೂಚ್ಯಂಕ ಗುರುವಾರ ದಿಢೀರ್ ಕುಸಿತ ಕಂಡಿದೆ. ಕಳೆದ ಮೂರು ವಾರಗಳಲ್ಲೇ ಅತ್ಯಂತ ಕೆಟ್ಟ ದಿನಕ್ಕೆ ಹೂಡಿಕೆದಾರರು ಸಾಕ್ಷಿಯಾಗಿದ್ದು ಸೆನ್ಸೆಕ್ಸ್ ಬರೋಬ್ಬರಿ 1,066 ಅಂಕಗಳ ಕುಸಿತ ಕಂಡಿದೆ.ಯುರೋಪ್‌ನಲ್ಲಿ ಕೊರೊನಾ ವೈರಸ್‌ನ ಪ್ರಕರಣಗಳು ಏರಿಕೆಯಾಗುತ್ತಲೇ ಸಾಗಿರುವುದು ಹೂಡಿಕೆದಾರರನ್ನು ಆತಂಕಕ್ಕೆ ತಳ್ಳಿದೆ.
ಪರಿಣಾಮ ದಿನದ ವಹಿವಾಟಿನಲ್ಲಿ ಒಂದು ಹಂತದಲ್ಲಿ ಸೆನ್ಸೆಕ್ಸ್ 1,097 ಅಂಕಗಳ ಕುಸಿತ ಕಂಡು 39,696.76 ಅಂಕಗಳಿಗೆ ಇಳಿಕೆಯಾಗಿತ್ತು. ನಂತರ ಅಲ್ಪ ಚೇತರಿಕೆ ಕಂಡು 39,728 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು.ಇತ್ತ ನಿಫ್ಟಿಯೂ ಒಂದು ಹಂತದಲ್ಲಿ 304.75 ಅಂಕಗಳ ಇಳಿಕೆಯೊಂದಿಗೆ 11,666.30 ಅಂಕಗಳಿಗೆ ಇಳಿಕೆಯಾಗಿತ್ತು. ಇಲ್ಲೂ ಅಲ್ಪ ಏರಿಕೆ ದಾಖಲಾಗಿ 11,680 ಅಂಕಗಳಿಗೆ ದಿನದ ವಹಿವಾಟು ಕೊನೆಗೊಂಡಿತು.
ನಿಫ್ಟಿಯಲ್ಲಿ ಎಚ್‌ಸಿಎಲ್, ಟೆಕ್ ಮಹೀಂದ್ರ, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್ ಮತ್ತು ಇನ್ಫೋಸಿಸ್ ಷೇರುಗಳು ಶೇ. 2.60 ಯಿಂದ ಶೇ. 3.76ರವರೆಗೆ ಕುಸಿತ ಕಂಡವು. ಈ ಬೃಹತ್ ಕುಸಿತದ ನಡುವೆಯೂ ಟಾಟಾ ಸ್ಟೀಲ್, ಹೀರೋ ಮೋಟೋಕಾರ್ಪ್, ಹಿಂಡಾಲ್ಕೋ, ಜೆಎಸ್‌ಡಬ್ಯೂ ಸ್ಟೀಲ್ ಷೇರುಗಳು ಶೇ. 1.15 ರಿಂದ 2.52ವರೆಗೆ ಏರಿಕೆ ದಾಖಲಿಸಿದ್ದು ವಿಶೇಷ.ಬ್ರಿಟನ್ ಷೇರು ಮಾರುಕಟ್ಟೆ ಶೇ. 2.26ರಷ್ಟು ಕುಸಿತ ಕಂಡಿದ್ದು ಹಾಗೂ ಅಮೆರಿಕಾದ ಹಣಕಾಸು ಕಾರ್ಯದರ್ಶಿ ಸ್ವೀವನ್ ನ್ಯೂಚಿನ್, ನವೆಂಬರ್ 3ರ ಮೊದಲು ಪರಿಹಾರ ಪ್ಯಾಕೇಜ್ ಘೋಷಣೆ ಅಸಾಧ್ಯ ಎಂದಿದ್ದು ಹೂಡಿಕೆದಾರರಿಗೆ ನಿರಾಸೆ ಮೂಡಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
