ನವದೆಹಲಿ:
ದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಸಿಎಎ ವಿರುದ್ಧ 13 ಮಹಾನಗರಗಳಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಗಳಲ್ಲಿ ಕೆಲವು ಕಡೆಗಳಲ್ಲಿ ಹಿಂಸಾಚಾರಕ್ಕೆ ತಿರುಗಿ ಇಲ್ಲಿಯವರೆಗೂ 3 ಜನರ ಸಾವಿಗೆ ಕಾರಣವಾಗಿದ್ದು ಗಾಯಗೊಂಡವರ ಸಂಖ್ಯೆ ಹೆಚ್ಚಳವಾಗುತ್ತಲೇ ಹೋಗುತ್ತಿದೆ . ನಿಷೇಧಾಜ್ಞೆ ನಡುವೆಯೂ ಉತ್ತರಪ್ರದೇಶ, ಬಿಹಾರ, ಗುಜರಾತ್, ಪಶ್ಚಿಮ ಬಂಗಾಳ, ಕರ್ನಾಟಕ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿರುವ ಸಾಕ್ಷ್ಯಗಳು ದೊರೆತಿವೆ.
ಉತ್ತರಪ್ರದೇಶದ ಲಖನೌನಲ್ಲಿ ಪ್ರತಿಭಟನಾಕಾರರು ಕಲ್ಲು ತೂರಿ 12 ಬೈಕ್ ಗಳು, ಕಾರು, ಮಾಧ್ಯಮದ ನೇರಪ್ರಸಾರ ವಾಹನಕ್ಕೆ ಬೆಂಕಿ ಹೆಚ್ಚಿದರು, ನಂತರ ಮಂಗಳೂರಿನಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 2 ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಿಂಸಾಚಾರ ನಡೆಯುತ್ತಿದ್ದ ವೇಳೆ ಸಾಮಾನ್ಯವಾಗಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಅಚಾನಕ್ಕಾಗಿ ಗುಂಡು ತಾಗಿ ಸಾವನ್ನಪ್ಪಿದ್ದಾನ್ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇನ್ನು ಸಂಭಲ್ ನಲ್ಲಿ ಸರ್ಕಾರಿ ಬಸ್ಸಿಗೆ ಬೆಂಕಿ ಹಚ್ಚಿ, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಲಾಗಿದೆ.
ಬಿಹಾರದ ಪಾಟ್ನ ಹಾಗೂ ಜೆಹಾನಾಬಾದ್ ನಲ್ಲಿ ಬಸ್ಸು ಹಾಗೂ ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಅಹಮದಾ ಬಾದ್ ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ. ಪಶ್ಚಿಮ ಬಂಗಾಳದ ದಿನಾಜ್ ಪುರದಲ್ಲಿ ಕಚ್ಚಾ ಬಾಂಬ್ ಎಸೆತ ನಡೆದಿರುವುದಾಗಿ ವರದಿಗಳು ತಿಳಿಸಿವೆ.