ಬಿಜೆಪಿ ಸೇರಿದ ಟಿಡಿಪಿಯ 4 ರಾಜ್ಯಸಭಾ ಸಂಸದರು..!!

ನವದೆಹಲಿ

     ಜೆ.ಪಿ.ನಡ್ಡಾ ಬಿಜೆಪಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದಿನ ಕಳೆಯುವುದರೊಳಗೆ, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರಿಗೆ ಬಿಜೆಪಿ ಆಘಾತ ನೀಡಿದ್ದು, ಗುರುವಾರ ಟಿಡಿಪಿಯ ನಾಲ್ವರು ರಾಜ್ಯಸಭಾ ಸಂಸದರು ತಮ್ಮ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ್ದಾರೆ.

      ಮಾಜಿ ಕೇಂದ್ರ ಸಚಿವ ವೈ.ಎಸ್. ಚೌಧರಿ ನೇತೃತ್ವದ ಮೇಲ್ಮನೆಯ ನಾಲ್ಕು ಬಂಡಾಯ ಟಿಡಿಪಿ ಸಂಸದರು ಆಂಧ್ರಪ್ರದೇಶ ಮೂಲದ ಪಕ್ಷವನ್ನು ತೊರೆಯಲು ಮತ್ತು ಬಂಡಾಯವೆದ್ದ ಗುಂಪನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಔಪಚಾರಿಕವಾಗಿ ನಿರ್ಣಯ ಅಂಗೀಕರಿಸಿದರು.

       ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿಯೇ, ವೈಎಸ್ ಚೌಧರಿ, ಸಿಎಂ ರಮೇಶ್, ಗರಿಕಪತಿ ಮೋಹನ್ ರಾವ್ ಮತ್ತು ಟಿ.ಜಿ.ವೆಂಕಟೇಶ್ ಅವರು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ವಿಲೀನಕ್ಕೆ ಅವಕಾಶ ನೀಡುವಂತೆ ಕೋರಿ ಪತ್ರ ಬರೆಯುವ ನಿರ್ಣಯ ಕೈಗೊಂಡರು.

    ತಮ್ಮ ಪಕ್ಷದ ವಿಲೀನವನ್ನು ಅಂಗೀಕರಿಸಲು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೂ ಪತ್ರ ಮುಖೇನ ಕೋರಲು ಅವರು ನಿರ್ಧರಿಸಿದ್ದಾರೆ.ಶೀಘ್ರವಾಗಿ ಕಾರ್ಯಪ್ರವೃತ್ತರಾದ ನಾಲ್ವರು ಬಂಡಾಯ ಸಂಸದರು, ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಅವರನ್ನು ಭೇಟಿ ಮಾಡಿ, ನಂತರ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದರು.

     ಮಾಜಿ ಸಚಿವ ವೈ.ಎಸ್.ಚೌಧರಿ ಮತ್ತು ಇತರರು ಮಂಡಿಸಿರುವ ಟಿಡಿಪಿ ಶಾಸಕಾಂಗ ಪಕ್ಷದ ಬಂಡಾಯ ವಿಭಾಗದ ವಿಲೀನ ನಿರ್ಣಯವನ್ನು ಸಂವಿಧಾನದ ಹತ್ತನೇ ಪರಿಚ್ಛೇದದ ನಿಬಂಧನೆಗಳ ಅಡಿಯಲ್ಲಿ ಮಾಡಬಹುದು ಎಂಬುದಾಗಿ ಬಂಡಾಯ ಸಂಸದರು ತಿಳಿಸಿದ್ದಾರೆ.

      ಟಿಡಿಪಿ 6 ರಾಜಸಭ್ಯಾ ಸದಸ್ಯರನ್ನು ಹೊಂದಿದ್ದು, ನಾಲ್ವರು ಈ ನಿರ್ಣಯ ಅಂಗೀಕರಿಸಿರುವುದರಿಂದ ಮೂರನೇ ಎರಡರಷ್ಟು ಬಹುಮತವಿದೆ ಎಂದು ಚೌಧರಿ ಹೇಳಿದ್ದಾರೆ.ಬಂಡಾಯ ಸಂಸದರು ನಡ್ಡಾ ಹಾಗೂ ರಾಜ್ಯಸಭೆಯಲ್ಲಿ ಬಿಜೆಪಿ ನಾಯಕ ಗೆಲ್ಹೋಟ್‌ ಅವರ ಸಮ್ಮುಖದಲ್ಲಿ ಟಿಡಿಪಿ ಅಧ್ಯಕ್ಷ ನಾಯ್ಡು ಅವರನ್ನು ಭೇಟಿಯಾಗಿ ವಿಲೀನಕ್ಕೆ ಅನಮತಿ ಕೋರಿದರು.

      ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾದ ಬಳಿಕ ಮೊದಲ ಸಲ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ಟಿಡಿಪಿ ಬಂಡಾಯ ಸಂಸದರನ್ನು ಸ್ವಾಗತಿಸಿದರು. ಟಿಡಿಪಿ ಸಂಸದರು ಪ್ರಧಾನಿ ನರೇಂದ್ರ ಅವರ ಕ್ರಿಯಾತ್ಮಕ ನಾಯಕತ್ವದಿಂದ ಪ್ರಭಾವಿತರಾಗಿದ್ದಾರೆ. ಅಮಿತ್ ಷಾ ಅವರ ಸಂಘಟನಾ ಕೌಶಲ್ಯವನ್ನೂ ಮೆಚ್ಚಿ ಬಿಜೆಪಿಗೆ ಬಂದಿದ್ದಾರೆ ಎಂದರು.

      ನರೇಂದ್ರ ಮೋದಿ ಅವರ ಪ್ರಥಮ ಅವಧಿಯ ಸರ್ಕಾರದಲ್ಲಿ ಚೌಧರಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಗಿದ್ದರು . ಚೌಧರಿ, ರಮೇಶ್‌ ಮತ್ತು ವೆಂಕಟೇಶ್‌ ಆಂಧ್ರಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದು, ರಾವ್‌ ತೆಲಂಗಾಣ ವನ್ನು ಪ್ರತಿನಿಧಿಸುತ್ತಿದ್ದಾರೆ .ಚಂದ್ರಬಾಬು ನಾಯ್ಡು 2018ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಾಗ ಚೌಧರಿ ಹಾಗೂ ವಿಮಾನಯಾನ ಸಚಿವರಾಗಿದ್ದ ಅಶೋಕ್‌ ಗಜಪತಿ ರಾಜು ಕೂಡ ಮೋದಿ ಸರ್ಕಾರದಿಂದ ಹೊರಬಂದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap