ನವದೆಹಲಿ:
ದೇಶದಲ್ಲಿ ಕೊರೋನಾ ರೌದ್ರನರ್ತನ ಎಂದಿನಂತೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 64,553 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24,61,191ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.
ಇದೇ ವೇಳೆ ಕೊರೋನಾಗೆ ದೇಶದಲ್ಲಿ 1007 ಮಂದಿ ಬಲಿಯಾಗಿದ್ದು, 3ನೇ ಬಾರಿ ಕೊರೋನಾ ದೈನಂದಿನ ಮರಣ ಸಂಖ್ಯೆ 1 ಸಾವಿರ ಗಡಿ ದಾಟಿದೆ. ಈ ಮೂಲಕ ಮೃತರ ಸಂಖ್ಯೆ 48,040ಕ್ಕೆ ತಲುಪಿದ್ದು, 50 ಸಾವಿರದತ್ತ ಸಾಗುತ್ತಿದೆ. ಇನ್ನು 24,61,191 ಮಂದಿ ಸೋಂಕಿತರ ಪೈಕಿ ಈ ವರೆಗೂ 17,51,556 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿ ಇನ್ನೂ 6,61,595 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 8,48,728 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








