ಲಕ್ನೊ,
ಉತ್ತರ ಪ್ರದೇಶದಲ್ಲಿ 6 ಹಂತದ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆ ಹಾಗೂ ಕೋಟ್ಯಾಧಿಪತಿ ಅಭ್ಯರ್ಥಿಗಳ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ.
ಭಾನುವಾರ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಪ್ರಮಾಣ ಶೇ. 21ರಷ್ಟಿದ್ದು, ಶೇ.6ರಷ್ಟು ಕಡಿಮೆಯಾಗಿದೆ. ಶೇ.33ರಷ್ಟು ಕೋಟ್ಯಾಧಿಪತಿಗಳಾಗಿದ್ದಾರೆ.
ಒಟ್ಟು 172 ಅಭ್ಯರ್ಥಿಗಳು ಕಣದಲ್ಲಿದ್ದು 36 ಜನ ಅಪರಾಧ ಹಿನ್ನೆಲೆಯುಳ್ಳವರು. ಅದರಲ್ಲಿ 29 ಅಭ್ಯರ್ಥಿಗಳು ಘೋರ ಅಪರಾಧ ಎಸೆಗಿದವರು ಎಂದು ಉತ್ತರಪ್ರದೇಶ ಚುನಾವಣಾ ಮೇಲ್ವಿಚಾರಣೆ ಮುಖ್ಯಸ್ಥ ಸಂಜಯ್ ಸಿಂಗ್ ಹೇಳಿದ್ದಾರೆ.
ಶ್ರಾವಸ್ತಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಧೀರೇಂದ್ರ ಪ್ರತಾಪ್ ಸಿಂಗ್ 8 ಪ್ರಕರಣಗಳಲ್ಲಿ ಆರೋಪಿ. ಲೋಹಿಯಾ ಲೋಕಸಭಾ ಕ್ಷೇತ್ರದ ಪ್ರಗತಿಶೀಲ ಸಮಾಜವಾದಿ ಪಕ್ಷದ ಅಭ್ಯರ್ಥಿ ಕಮಲಾ ದೇವಿ ಅವರ ಮೇಲೆ 5 ಪ್ರಕರಣಗಳಿವೆ.
56 ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದು ಬಿಜೆಪಿಯ 12, ಬಿಎಸ್‌ಪಿಯ 10, ಕಾಂಗ್ರೆಸ್ ಮತ್ತು ಎಸ್‌ಪಿಯ ತಲಾ 2 ಅಭ್ಯರ್ಥಿಗಳು 1 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಕೇಂದ್ರ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ಸುಲ್ತಾನ್‌ಪುರದಿಂದ ಸ್ಪರ್ಧಿಸುತ್ತಿದ್ದು, 55.6 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಕಾಂಗ್ರೆಸ್ ದೇಬವ್ರತ್ ಮಿಶ್ರಾ 51.09 ಕೋಟಿ ರೂ ಹಾಗೂ ಕಾಂಗ್ರೆಸ್‌ನ ಸುಲ್ತಾನ್‌ಪುರ ಕ್ಷೇತ್ರದ ಅಭ್ಯರ್ಥಿ ಸಂಜಯ್ ಸಿಂಗ್ 41.1 ಕೋಟಿ ರೂ. ಆಸ್ತಿ ಹೊಂದಿದ್ದಾರೆ.16 ಅಭ್ಯರ್ಥಿಗಳು ಪ್ಯಾನ್ ಸಂಖ್ಯೆ ಬಹಿರಂಗಪಡಿಸಿಲ್ಲ. ಓರ್ವ ಅಭ್ಯರ್ಥಿ ಅನಕ್ಷರಸ್ಥ.