ಲಖನೌ:
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ನಿರ್ಧರಿಸಿದೆ.
ಸಿಬಿಐ ವಿಚಾರಣಾ ನ್ಯಾಯಾಲಯ ಕಳೆದ ಸೆ. 30ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಶುಕ್ರವಾರ ರಾತ್ರಿ ಮುಕ್ತಾಯಗೊಂಡ ಎಐಎಂಪಿಎಲ್‌ಬಿಯ ಎರಡು ದಿನಗಳ ಕಾರ್ಯ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.ವರ್ಚುಯಲ್ ಮೂಲಕ ನಡೆದ ಸಭೆಯಲ್ಲಿ ಮಂಡಳಿಯ ಸದಸ್ಯರು ಏಕರೂಪದ ನಾಗರಿಕ ಸಂಹಿತೆಯ(ಯುಸಿಸಿ) ಅಪಾಯಯದ ಬಗ್ಗೆ ಚರ್ಚಿಸಿದ್ದಾರೆ. ತಮ್ಮ ಆತಂಕಗಳ ಕುರಿತು ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ತಿಳಿಸಲು ಸಹ ಸಭೆಯಲ್ಲಿ ನಿರ್ಧರಿಸಲಾಗಿದೆ. ಏಕರೂಪ ನಾಗರಿಕ ಸಂಹಿತಿ ವಿಷಯದ ಬಗ್ಗೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಸಹ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಿದೆ.
ಐಪಿಸಿ ಮತ್ತು ಸಿಆರ್‌ಪಿಸಿ ದುರುಪಯೋಗವನ್ನು ತಡೆಯುವ ಮಾರ್ಗಗಳನ್ನು ಸೂಚಿಸಲು ಬುದ್ದಿಜೀವಿಗಳ ಸಮಿತಿಯನ್ನು ರಚಿಸಲು ಸಹ ಮಂಡಳಿ ನಿರ್ಧರಿಸಿದೆ.ಸಭೆಯ ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷ ಮೌಲಾನಾ ಸಯೀದ್ ಮೊಹಮ್ಮದ್ ರಬೆ ಹಸ್ನಿ ನದ್ವಿ ವಹಿಸಿದ್ದರು. ಸಭೆಯ ಸಮನ್ವಯತೆಯನ್ನು ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ವಾಲಿ ರಹಮನಿ ವಹಿಸಿದ್ದರು ಬಾಬರಿ ಮಸೀದಿ ದ್ವಂಸ ಪ್ರಕರಣದ ಎಲ್ಲ ಆರೋಪಿಗಳನ್ನು ಖಲಾಸೆಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಸದಸ್ಯರು ತಮ್ಮ ಅಸಮಾಧಾನ ವನ್ನು ವ್ಯಕ್ತಪಡಿಸಿದ್ದಾರೆ. ಉನ್ನತ ನ್ಯಾಯಾಲಯದಲ್ಲಿ ತೀರ್ಪನ್ನು ಪ್ರಶ್ನಿಸಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿದೆ.ಈ ಮಧ್ಯೆ, ಬಾಬರಿ ಮಸೀದಿ ದ್ವಂಸ ಪ್ರಕರಣ ಕುರಿತ ಸಿಬಿಐ ನ್ಯಾಯಾಲಯದ ತೀರ್ಪಿನ ವಿರುದ್ಧ ಹಾಜಿ ಮಹಬೂಬ್ ಮತ್ತು ಇತರರು ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮಂಡಳಿಯ ವಕ್ತಾರ ಜಫರಾಯೇಬ್ ಜಿಲಾನಿ ಶನಿವಾರ ತಿಳಿಸಿದ್ದಾರೆ.
ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವುದಕ್ಕೆ ಹಾಜಿ ಮಹಬೂಬ್ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ನ್ಯಾಯಾಲಯ ಅವರ ಮನವಿಯನ್ನು ಅಂಗೀಕರಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
