ನವದೆಹಲಿ:
ಭಾರತ ಮತ್ತು ಚೀನಾ ನಡುವೆ ಗಡಿವಿವಾದ ಕುರಿತು ಜಟಾಪಟಿ ಮುಂದುವರಿದಿರುವಂತೆ ಭಾರತದ ಬೆನ್ನಿಗೆ ನಿಂತಿರುವ ಅಮೆರಿಕ ಜಂಟಿ ಸಮರಾಭ್ಯಾಸಕ್ಕೆ ಮುಂದಾಗಿದೆ. ಹಿಂದೂ ಮಹಾಸಾಗರದಲ್ಲಿ ನಡೆಯಲಿರುವ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಯುಎಸ್ಎಸ್ ನಿಮಿಟ್ಸ್ ಯುದ್ಧನೌಕೆಯನ್ನು ಭಾರತಕ್ಕೆ ಕಳುಹಿಸಿದೆ.
ಯುಎಸ್ಎಸ್ ನಿಮಿಟ್ಸ್ ಅಮೆರಿಕ ನೌಕಾಪಡೆಯ ಮುಂಚೂಣಿ ಯುದ್ಧನೌಕೆಯಾಗಿದ್ದು, ಯುದ್ಧವಿಮಾನಗಳನ್ನು ಹೊತ್ತೊಯ್ಯಲು ಸಮರ್ಥವಾಗಿದೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲೆಂದೇ ನೌಕಾ ಸಮರಾಭ್ಯಾಸದಲ್ಲಿ ತೊಡಗಿರುವ ಭಾರತೀಯ ನೌಕಾಪಡೆಯ ಯುದ್ಧನೌಕೆಗಳೊಂದಿಗೆ ಯುಎಸ್ಎಸ್ ನಿಮಿಟ್ಸ್ ಕೂಡ ಸಮರಾಭ್ಯಾಸ ನಡೆಸಲಿದೆ.
PASSEX (ಪಾಸಿಂಗ್ ಸಮರಾಭ್ಯಾಸ) ಎಂಬ ಹೆಸರಿನ ಈ ಸಮರಾಭ್ಯಾಸವು ಮಲಬಾರ್ ನೌಕಾಪಡೆ ಸಮರಾಭ್ಯಾಸ ಆರಂಭಕ್ಕೂ ಮುನ್ನ ನಡೆಯುತ್ತಿರುವುದು ವಿಶೇಷವಾಗಿದೆ. ಏಷ್ಯಾ-ಪೆಸಿಫಿಕ್ ವಲಯದಲ್ಲಿ ಪ್ರಾಬಲ್ಯ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಚೀನಾಕ್ಕೆ ಭಾರತ ಮತ್ತು ಅಮೆರಿಕ ನೇರವಾಗಿ ನೀಡುತ್ತಿರುವ ಎಚ್ಚರಿಕೆ ಎಂದೇ ಪರಿಭಾವಿಸಲಾಗುತ್ತಿದೆ. ಮಲಕ್ಕಾ ಸ್ಟ್ರೇಟ್ ಮೂಲಕ ಹಿಂದೂ ಮಹಾಸಾಗರವನ್ನು ಶನಿವಾರ ಪ್ರವೇಶಿಸಿರುವ ಯುಎಸ್ಎಸ್ ನಿಮಿಟ್ಸ್ ಯಾವುದೇ ಕ್ಷಣದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹವನ್ನು ತಲುಪುವ ಸಾಧ್ಯತೆ ಇದೆ. ಯುಎಸ್ಎಸ್ ನಿಮಿಟ್ಸ್ ಅಂದಾಜು 1 ಲಕ್ಷ ಟನ್ ಭಾರವಿದ್ದು, 90 ಯುದ್ಧವಿಮಾನಗಳನ್ನು ಕೊಂಡೊಯ್ಯಲು ಸಮರ್ಥವಾಗಿದೆ.
ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿ ನಡೆಯುತ್ತಿರುವ ನೌಕಾಪಡೆ ಸಮರಾಭ್ಯಾಸದಲ್ಲಿ ಭಾರತೀಯ ನೌಕಾಪಡೆಯ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (ಎಎನ್ಸಿ) ಮತ್ತು ಪೂರ್ವ ನೇವಲ್ ಕಮಾಂಡ್ನ (ಎಎನ್ಸಿ) ಯುದ್ಧನೌಕೆಗಳು ಮತ್ತು ಜಲಂತಾರ್ಗಾಮಿಗಳು ಪಾಲ್ಗೊಳ್ಳುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/07/aircraft_carrier_uss_nimitz.gif)