
ಕೊರೋನಾ ಕಾರಣದಿಂದಾಗಿ ಭಾರತದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದೆ. ಅದರಲ್ಲೂ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕುಸಿತಕ್ಕೊಳಗಾದ ಭಾರತದ ಆರ್ಥಿಕತೆಯನ್ನು ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಕೊರೋನಾ ಆರ್ಥಿಕ ಪುನಶ್ಚೇತನದ ಪ್ಯಾಕೇಜ್ (ಆತ್ಮ ನಿರ್ಭರ್ ಪ್ಯಾಕೇಜ್) ಸೂಕ್ತವಾದ ಪ್ಯಾಕೇಜ್ ಅಲ್ಲ. ಅದೊಂದು ಅಸಮರ್ಪಕ ಪ್ಯಾಕೇಜ್ ಆಗಿದ್ದು, ಅದರಲ್ಲಿ ಕೇವಲ ಹಣಕಾಸಿನ ರಿಯಾಯಿತಿಗಳನ್ನು ಮಾತ್ರ ನೀಡಲಾಗಿದೆಯೇ ಹೊರತು ಇಂತಹ ಪ್ಯಾಕೇಜ್‌ನಿಂದ ಆರ್ಥಿಕತೆಯನ್ನು ಸುಧಾರಿಸುವುದು ಸಾಧ್ಯವೇ ಇಲ್ಲ. ಆದಾಗ್ಯೂ ಬಿಜೆಪಿ ಪಕ್ಷವೂ 2024ರ ಲೋಕಸಭಾ ಚುಣಾವಣೆಯಲ್ಲಿ ಮತ್ತೊಮ್ಮೆ ಹಿಂದುತ್ವದ ಅಲೆಯಲ್ಲಿ ಗೆಲುವು ಸಾಧಿಸಲಿದೆ. ಈಹಿಂದೆ 2014 ಮತ್ತು 2019ರಲ್ಲಿ ಸಹ ಬಿಜೆಪಿ ಪಕ್ಷದ ಹಿಂದುತ್ವದ ಅಲೆ ಗೆದ್ದಿತ್ತು ಎಂದು ಸ್ವತಃ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಆಂಗ್ಲ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುಸಿಯುತ್ತಿರುವ ಭಾರತ ಆರ್ಥಿಕತೆಯ ಕುರಿತು ಮತ್ತೊಮ್ಮೆ ಪ್ರಮುಖ ಪ್ರಶ್ನೆಗಳನ್ನು ಎತ್ತುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಸಂಸದ ಸುಬ್ರಮಣಿಯನ್ ಸ್ವಾಮಿ, “ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 21 ಟ್ರಿಲಿಯನ್ ಮೊತ್ತದ ಪರಿಹಾರವನ್ನು ಘೋಷಿಸಿದೆ. ಆದರೆ, ಅದರಲ್ಲಿ, ಕೇವಲ 1.2 ಟ್ರಿಲಿಯನ್ ಮಾತ್ರ ಪ್ರೋತ್ಸಾಹಕವಾಗಿದ್ದು, ಉಳಿದ ಎಲ್ಲವೂ ಕೇವಲ ಉದ್ದೀಪಕ ಮತ್ತು ಹಣಕಾಸು ರಿಯಾಯಿತಿಗಳಾಗಿವೆ.
ಹೀಗಾಗಿ ಈ ಪ್ರೋತ್ಸಾಹಕ ಪ್ಯಾಕೇಜ್ ಅಸಮರ್ಪಕವಾಗಿದ್ದು, ಅದು ಕೇವಲ ಅಧಿಕಾರದಲ್ಲಿದ್ದವರಿಗೆ ಹೆಸರು ತಂದುಕೊಡಲಷ್ಟೆ ಶಕ್ತವಾಗಿದೆಯೇ ಹೊರತು ಈ ಪ್ಯಾಕೇಜ್‌ನಿಂದ ಬಡವರಿಗೆ, ಸಮಾಜ ತಳಮಟ್ಟದಲ್ಲಿರುವವರಿಗೆ ಯಾವುದೇ ಲಾಭವಾಗಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.
“2014-15 ರ ಆರ್ಥಿಕ ವರ್ಷದಲ್ಲಿ ದೇಶದ ಅಭಿವೃದ್ಧಿ ದರ ಶೇ.8 ರಷ್ಟಿತ್ತು. ನಂತರದ ವರ್ಷಗಳಲ್ಲಿ ಅದು ವರ್ಷದಿಂದ ವರ್ಷಕ್ಕೆ ಕುಸಿತವನ್ನು ದಾಖಲಿಸುತ್ತಾ ಬಂದಿದೆ. 2019-20 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಅಭಿವೃದ್ಧಿ ದರ ಶೇ.3.1 ಕ್ಕೆ ಕುಸಿದಿತ್ತು. ವಾಸ್ತವದಲ್ಲಿ ಇದು ಭಾರತದ ಆರ್ಥಿಕತೆ ದಾಖಲಿಸಿದ ಅತ್ಯಂತ ಕೆಟ್ಟ ಶೇಕಡಾವಾರು.
ಆದರೆ, ಕೊರೋನಾ ನಂತರದಲ್ಲಿ ಈ ಪ್ರಮಾಣ ಮತ್ತಷ್ಟು ಕುಸಿತ ಕಂಡಿದೆ. ಲಾಕ್‌ಡೌನ್ ಹೇರಿಕೆಯಿಂದಾಗಿ ವ್ಯಾಪಾರ, ವಹಿವಾಟು, ಉತ್ಪಾದನಾ ಕ್ಷೇತ್ರ ಎಲ್ಲವೂ ಸಂಪೂರ್ಣ ಸ್ಥಗಿತಗೊಂಡಿದ್ದು, ಅಭಿವೃದ್ಧಿ ಸೂಚ್ಯಂಕ ಪಾತಾಳಕ್ಕೆ ಕುಸಿದೆ. ಅದಾಗಲೇ ಏದುಸಿರು ಬಿಡುತ್ತಿದ್ದ ಭಾರತದ ಆರ್ಥಿಕತೆಯನ್ನು ಕೊರೋನಾ ಸಂಪೂರ್ಣವಾಗಿ ಮುಗಿಸಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಇನ್ನೂ ದೇಶದ ಜಿಡಿಪಿ ದರ ಗಣನೀಯವಾಗಿ ಕುಸಿಯುತ್ತಿದೆ ಎಂದು ನಾನು ಆರಂಭದಿಂದಲೂ ಹೇಳುತ್ತಲೇ ಇದ್ದೆ. ಆದರೆ, ಎಲ್ಲರೂ ನನಗೆ ಬೈದು ಬಾಯಿಮುಚ್ಚಿಸುತ್ತಿದ್ದರು. ಈ ಕುರಿತು ಧ್ವನಿ ಎತ್ತುವಾಗಲೆಲ್ಲಾ ನಾನು ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದೆ. ಈಗ, 2020-2021 ರ ಹಣಕಾಸು ವರ್ಷದ ಆರಂಭದಲ್ಲಿ (ಏಪ್ರಿಲ್-ಜೂನ್ 30) ದೇಶದ ಜಿಡಿಪಿ ಶೇ-23.9 ರಷ್ಟು ಋಣಾತ್ಮಕವಾಗಿ ಕುಸಿದಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಅಭಿವೃದ್ಧಿ ದರ ಶೇ-15 ಗೆ ಇಳಿಯಬಹುದು” ಎಂದು ಅಂದಾಜಿಸಿದ್ದಾರೆ.
“ಕಳೆದ ನಾಲ್ಕೈದು ವರ್ಷಗಳಿಂದ ವಿತ್ತೀಯ ಕೊರತೆಯುಂಟಾಗಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದಾಗಿ ಇದು ಸಂಭವಿಸಿದೆ. ಇದನ್ನು ತೆರಿಗೆ ಭಯೋತ್ಪಾದನೆ ಎಂದು ನಾವು ಕರೆಯಬಹುದು. ಆದಾಯ ತೆರಿಗೆ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಹೀಗಾಗಿ ಈಗಲಾದರೂ ಸರ್ಕಾರ ಜನರ ಕೈಗೆ ಹೇಗೆ ಹಣ ತಲುಪಬೇಕು ಎಂಬುದರ ಬಗ್ಗೆ ಯೋಚಿಸಬೇಕು” ಎಂದು ಅವರು ಹೇಳಿದ್ದಾರೆ.
