ನವದೆಹಲಿ
ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ಸೀನಿಯರ್ ಪುರುಷರ ತಂಡದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಅರ್ಜಿ ಕರೆದಿದೆ. ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್, ಫೀಲ್ಡಿಂಗ್ ಕೋಚ್ ಹಾಗೂ ಫಿಸಿಯೊ, ಸ್ಟ್ರೆಂಥ್ ಆ್ಯಂಡ್ ಕಂಡಿಷನಿಂಗ್ ಹಾಗೂ ಆಡ್ಮಿನಿಸ್ಟ್ರೇಟಿವ್ ಮ್ಯಾನೇಜರ್ ಹುದ್ದೆಗಳಿಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 30 ರೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.
ಟೀಮ್ ಇಂಡಿಯಾದ ಸದ್ಯದ ಕೋಚ್ ರವಿ ಶಾಸ್ತ್ರಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ನೇರ ಅರ್ಹತೆ ನೀಡಲಾಗಿದ್ದು, ಇವರು ಹೊಸದಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ರವಿ ಶಾಸ್ತ್ರಿ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ 2017ರಲ್ಲಿ ನೇಮಕ ಮಾಡಲಾಗಿತ್ತು. ಅನಿಲ್ ಕುಂಬ್ಳೆ ಅವರಿಂದ ತೆರವಾದ ಸ್ಥಾನಕ್ಕೆ ಶಾಸ್ತ್ರಿ ಅವರು ಬಂದಿದ್ದರು. 57 ವರ್ಷದ ಶಾಸ್ತ್ರಿ ಅವರು ಇದಕ್ಕೂ ಮೊದಲು 2014ರಲ್ಲಿ ಟೀಮ್ ಇಂಡಿಯಾದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಪುರಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರವಿಶಾಸ್ತ್ರಿ ಅವರು ತಂಡದ ಮುಂದಾಳತ್ವ ವಹಿಸಿದ್ದರು. ಈ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ಸ್ ನಲ್ಲಿ ಸೋಲು ಅನುಭವಿಸಿತು. ಆದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೊಚ್ಚಲಬಾರಿಗೆ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.
ಐಸಿಸಿ ಟೂರ್ನಿಯಲ್ಲಿ ಭಾರತ ನೀರಸ ಪ್ರದರ್ಶನ ನೀಡಿದೆ. 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. 2015 ಏಕದಿನ ವಿಶ್ವಕಪ್ ಹಾಗೂ 2016ರ ಟಿ-20 ವಿಶ್ವಕಪ್ ನಲ್ಲಿ ಶಾಸ್ತ್ರಿ ಅವರು ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ಈ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಉಪಾಂತ್ಯದಲ್ಲಿ ಸೋಲು ಕಂಡಿದೆ.
ಟೀಮ್ ಇಂಡಿಯಾದ ತರಬೇತುದಾರರ ರವಿ ಶಾಸ್ತ್ರಿ ಅವರಿಗಿನ ಒಪ್ಪಂದ ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಕೊನೆಯಾಗಲಿದೆ.
ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಫೀಲ್ಡಿಂಗ್ ಕೋಚ್ ಶ್ರೀಧರ್ ಸೇರಿದ್ದಾರೆ. ಇವರ ಅವಧಿಯನ್ನು 45 ದಿನಗಳ ವಿಸ್ತರಣೆ ಮಾಡಲಾಗಿದ್ದು, ವಿಂಡೀಸ್ ಪ್ರವಾಸದ ಬಳಿಕ ಇವರ ಅಧಿಕಾರ ಅವಧಿ ಕೊನೆಯಾಗಲಿದೆ. ನೂತನ ಕೋಚ್ ಹಾಗೂ ಸಿಬ್ಬಂದಿಗಳು ಸೆ.5, 2019 ರಿಂದ ನ.24, 2021ರ ವರೆಗೆ ಇದಲಿದ್ದು, ಮ್ಯಾನೇಜರ್ ಅವರ ಅವಧಿ ಒಂದು ವರ್ಷದಾಗಿರಲಿದೆ.
ಬಿಸಿಸಿಐ ಮುಖ್ಯ ಕೋಚ್ ಗೆ ಕೆಲವು ಮಾನದಂಡಗಳನ್ನು ಸೂಚಿಸಿದೆ. ಅದರಂತೆ ಅಭ್ಯರ್ಥಿ 60 ವರ್ಷದ ಮೇಲ್ಪಟ್ಟವನಾಗಿರಬಾರದು. ಅಲ್ಲದೆ 30 ಟೆಸ್ಟ್ ಇಲ್ಲ, 50 ಏಕದಿನ ಪಂದ್ಯ ಆಡಿರುವ ಅನುಭವ ಹೊಂದಿರಬೇಕು ಎಂದು ತಿಳಿಸಿದೆ,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
