ನವದೆಹಲಿ
ಹೊಸದಾಗಿ ಬಂದ ಸಂಚಾರಿ ನಿಯಮಗಳ ಮೂಲಕ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಸಾರಿಗೆ ಸಚಿವಾಲಯ ಇದೀಗ ಮತ್ತೊಂದು ಅಂತಹುದ್ದೇ ಕೆಲಸಕ್ಕೆ ಕೈ ಹಾಕಿದೆ.
ಹಳೆಯ ವಾಹನಗಳ ಮೇಲೆ ನಿಷೇಧ ಹೇರಲು ಚಿಂತನೆಯಲ್ಲಿ ತೊಡಗಿದೆ.ಮೂಲಗಳ ಪ್ರಕಾರ ಪರಿಸರದ ಮೇಲೆ ಪರಿಣಾಮ ಬೀರುವ ಹಳೆಯ ವಾಹನಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದ್ದು. ಇದಕ್ಕಾಗಿ ಹಳೆಯ ವಾಹನಗಳನ್ನು ಗುಜರಿ ಹಾಕುವಂತಹ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಅದರಂತೆ 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ನಿಷೇಧಕ್ಕೆ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.
ರಸ್ತೆ ಸಾರಿಗೆ ಸಚಿವಾಲಯವು ಸಿದ್ಧಪಡಿಸುತ್ತಿರುವ ವಾಹನ ರದ್ದು ನೀತಿಗೆ ಈಗಾಗಲೇ ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ದೊರೆತಿದೆ ಮತ್ತು ಹೆಚ್ಚಿನ ಅನುಮತಿಗಾಗಿ ಇತ್ತೀಚೆಗೆ ಪ್ರಧಾನಿ ಕಚೇರಿಗೂ ಕಳುಹಿಸಲಾಗಿದೆ. ಪಿಎಂಒ ಕೂಡ ಇದಕ್ಕೆ ಒಪ್ಪಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ.
ಈ ಹೊಸ ನೀತಿ ಅನ್ವಯ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ರಸ್ತೆಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೆ ಮರು ನೋಂದಣಿ ಶುಲ್ಕವನ್ನು ಹಲವಾರು ಹಂತಗಳಿಂದ ಹೆಚ್ಚಿಸಲು ಸಹ ಇದು ಶಿಫಾರಸು ಮಾಡುತ್ತದೆ. 15 ವರ್ಷಗಳಿಂದ ಚಾಲನೆಯಲ್ಲಿರುವ ವಾಹನವು ಮರು ನೋಂದಣಿಗೆ ಮಾಡಿಸಿಕೊಳ್ಳಬೇಕು ಇದಕ್ಕಾಗಿ ಖಾಸಗಿ ನಾಲ್ಕು ಚಕ್ರಗಳ ವಾಹನದ ಮರು ನೋಂದಣಿಯು ಪ್ರಸ್ತುತ 600 ರೂ.ನಿಂದ 15,000 ರೂ.ಗಳವರೆಗೆ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ