ಬೆಹ್ರಾಂಪುರ್:
ಲಾಕ್ ಡೌನ್ ಕಾರಣದಿಂದಾಗಿ ಗುಜರಾತ್ ನಲ್ಲಿ ಸಿಲುಕಿದ್ದ ಒಡಿಶಾದ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಶನಿವಾರ ರಾತ್ರಿ ಅಪಘಾಕ್ಕಿಡಾಗಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದು, ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಡಿಶಾದ ಗಂಜಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 55 ಮಂದಿ ಪ್ರಯಾಣಿಸುತ್ತಿದ್ದ ಈ ಬಸ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಭಂಜಾನಗರ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಎಸ್ ಎಸ್ ಮಿಶ್ರಾ ಅವರು ತಿಳಿಸಿದ್ದಾರೆ.
ಅಪಘಾತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. 40 ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದಕ್ಷಿಣ ವಲಯ ಡಿಐಜಿ ಸತ್ಯಬ್ರತ್ ಭೊಯಿ ಅವರು ಹೇಳಿದ್ದಾರೆ.
ಲಾಕ್ ಡೌನ್ ನಿಂದಾಗಿ ಗುಜರಾತ್ ನ ಸೂರತ್ ನಲ್ಲಿ ಸಿಲುಕಿದ್ದ ಒಡಿಶಾದ ಕಾರ್ಮಿಕರು ಏಳು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದರು. ಆ ಪೈಕಿ ಒಂದು ಬಸ್ ಅಪಘಾತಕ್ಕಿಡಾಗಿದೆ ಎಂದು ಒಡಿಶಾ ಸಾರಿಗೆ ಸಚಿವ ಪದ್ಮನಾಭ್ ಬೆಹೆರಾ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
