ನವದೆಹಲಿ
ಪರಸ್ಪರ ಮಾಹಿತಿ ವಿನಿಮಯ ಒಪ್ಪಂದದ ಮೂಲಕ ಭಾರತದೊಂದಿಗೆ ಸ್ವಿಟ್ಜರ್ಲೆಂಡ್ ಹಂಚಿಕೊಂಡಿರುವ ಮಾಹಿತಿಯನ್ನು ಗೋಪ್ಯತೆಯ ಕಾರಣದಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವಾಲಯ, ಇತರೆ ವಿದೇಶಿ ಬ್ಯಾಂಕುಗಳಿಂದಲೂ ಸಂಗ್ರಹಿಸಿರುವ ಕಪ್ಪುಹಣದ ವಿವರಗಳನ್ನು ಕೂಡ ಬಹಿರಂಗಪಡಿಸಲು ನಿರಾಕರಿಸಿದೆ ಆರ್ ಟಿ ಐ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಪರಸ್ಪರ ಗೋಪ್ಯತಾ ಒಪ್ಪಂದಗಳಿಗೆ ಬದ್ಧರಾಗಿ ಅಂತಹ ಒಪ್ಪಂದಗಳ ಅಡಿಯಲ್ಲಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 (1) (a) ಮತ್ತು 8 (1) (f) ಅಡಿ ವಿದೇಶಿ ಸರ್ಕಾರಗಳಿಂದ ಪಡೆದ/ಕೇಳಲಾದ ಮಾಹಿತಿಗಳನ್ನು ಹಾಗೂ ತೆರಿಗೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗಪಡಿಸದೆ ಇರಲು ವಿನಾಯಿತಿ ನೀಡಲಾಗಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸರ್ಕಾರ ಪ್ರತಿಕ್ರಿಯೆ ನೀಡಿದೆ.
ಸ್ವಿಟ್ಜರ್ಲೆಂಡ್‌ನ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ವಿವರಗಳನ್ನು ಪಡೆದುಕೊಂಡಿರುವುದಾಗಿ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಈ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಲಾಗಿತ್ತು. ಜತೆಗೆ ಭಾರತದೊಂದಿಗೆ ಹಂಚಿಕೊಂಡಿರುವ ದಾಖಲೆಗಳ ವಿವರಗಳು ಸೇರಿದಂತೆ ವಿದೇಶಗಳಲ್ಲಿ ಸ್ವೀಕೃತವಾಗಿರುವ ಕಪ್ಪುಹಣದ ಮಾಹಿತಿಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








