ನವದೆಹಲಿ:
ಸತತ ಮಾರುಕಟ್ಟೆ ಕುಸಿತ ಮತ್ತು ಆರ್ಥಿಕ ಹಿಂಜರಿತದಂತಹ ಹೊಡೆತಗಳಿಂದ ತೀವ್ರವಾಗಿ ತತ್ತರಿಸಿ ಹೋಗಿರುವ ಟೆಲಿಕಾಂ ಕ್ಷೇತ್ರಕ್ಕೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದರಂತೆ ದೂರಸಂಪರ್ಕ ಸೇವಾ ಸಂಸ್ಥೆಗಳಾದ ಭಾರ್ತಿ ಏರ್ ಟೆಲ್, ರಿಲಯನ್ಸ್ ಜಿಯೋ, ವೊಡಾಪೋನ್ ಇಂಡಿಯಾ ಸೇರಿ ಅನೇಕ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ಸ್ಪೆಕ್ಟ್ರಮ್ ಬಾಕಿ ಮೊತ್ತ ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡಿದೆ ಎಂದು ತಿಳಿದು ಬಂದಿದೆ.
ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ)ನ ಡಿಜಿ ರಾಜನ್ ಮ್ಯಾಥ್ಯೂಸ್, ಮೊಬೈಲ್ ಕರೆ ಮತ್ತು ಡೇಟಾ ದರಗಳಲ್ಲಿ ಪ್ರಸ್ತಾವಿತ ಸುಂಕ ಹೆಚ್ಚಳದ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರದ ನಡೆ ಅಲ್ಪ ಮಟ್ಟದಲ್ಲಿ ಸಹಾಯವಾದರೂ ಪರಿಪೂರ್ಣ ಚೇತರಿಕೆಗೆ ಸಾಕಷ್ಟು ಸಮಯ ಬೇಕಾಗಬಹುದು ಎಂದಿದ್ದಾರೆ.
ಟೆಲಿಕಾಂ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸ್ಪೆಕ್ಟ್ರಮ್ ಶುಲ್ಕದ ಮೊತ್ತವು ಸರಿ ಸುಮಾರು ೪೨ ಸಾವಿರ ಕೋಟಿಯಷ್ಟಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಆದರೆ ಅ.24ರಂದು ಸುಪ್ರೀಂ ಕೋರ್ಟ್ ನೀಡಿದ್ದ ತಿರ್ಪಿನನ್ವಯ ಉದ್ಭವಿಸಿರುವ 1.47 ಲಕ್ಷ ಕೋಟಿ ಹೊಂದಾಣಿಕೆ ಮಾಡಲಾಗದ ಒಟ್ಟು ಆದಾಯದಲ್ಲಿ ಯಾವ ರಿಯಾಯಿತಿ ನಿಡಲು ಕೇಂದ್ರ ನಿರಾಕರಿಸಿದೆ. ಈ ವಿಚಾರದಲ್ಲಿ ರಿಯಾಯಿತಿ ನೀಡಲು ಸುಪ್ರೀಂ ಕೋರ್ಟ್ ಗೆ ಮಾತ್ರವೇ ಅವಕಾಶವಿದೆ.ದೂರಸಂಪರ್ಕ ಕಂಪನಿಗಳು ಇದಾಗಲೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಿಸಿದೆ.ಒಂದು ವೇಳೆ ಕೋರ್ಟ್ ಗೆ ಸಮಸ್ಯೆಯ ಮನವರಿಕೆಯಾದರೆ ನೆರವು ದೊರೆಯುವ ಸಂಭವವಿದೆ ಎಂದು ಒಕ್ಕೂಟ ಅಭಿಪ್ರಾಯ ಪಟ್ಟಿದೆ .
ದೂರಸಂಪರ್ಕ ಸೇವಾ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಅವುಗಳಿಗೆ ಈ ಅನುವು ಮಾಡಿಕೊಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
