ನವದೆಹಲಿ :
ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ ರಫ್ತು ಮಾಡುವುದನ್ನು ನಿಷೇಧಿಸಿದ್ದ ಹೈಡ್ರಾಕ್ಸಿ ಕ್ಲೋರೋಕ್ವಿನ್ ಔಷಧಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ . ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನಂತರ .ಕೇಂದ್ರ ಸರ್ಕಾರ ದೇಶೀಯವಾಗಿ ತಯಾರಾಗುವ ೨೪ ಔಷಧಿಗಳ ಮೇಲಿನ ರಫ್ತು ನಿರ್ಬಂಧ ತೆರವುಗೊಳಿಸಿದೆ.
ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಕೇಂದ್ರ ಸರ್ಕಾರ ದೇಶೀ ನಿರ್ಮಿತ ಕೆಲ ಔಷಧಿಗಳ ಮೇಲೆ ನಿರ್ಬಂಧ ಹೇರಿತ್ತು. ಈ ಔಷಧಿಗಳನ್ನು ರಫ್ತು ಮಾಡದಂತೆ ಸೂಚನೆ ನೀಡಿತ್ತು. ಆದರೆ ಈಗ ವಿಶ್ವಾದ್ಯಂತ ಕೊರೋನಾ ವೈರಸ್ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈ ಭಾರತೀಯ ಔಷಧಗಳಿಗೆ ಭಾರೀ ಬೇಡಿಕೆ ಬಂದಿದೆ. ಇದೇ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಈ ಔಷಧಿಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದೆ.
ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿ ಟ್ರಂಪ್, ಭಾರತಕ್ಕೆ ಅಮೆರಿಕದ ಬಗ್ಗೆ ತಿಳಿದಿದೆ. ಭಾರತ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಫ್ತು ಮಾಡುತ್ತದೆ ಎಂಬ ವಿಶ್ವಾಸವಿದೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು, ಔಷಧಿ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದೇನೆ , ಅಲ್ಲದೆ ಅಮೆರಿಕಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ರಫ್ತು ಮಾಡುವಂತೆ ಕೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದಿದ್ದಾರೆ. ಒಂದು ವೇಳೆ ಭಾರತ ಔಷಧಿ ರಫ್ತು ಮಾಡದಿದ್ದರೂ ನಮಗೆ ಅಚ್ಚರಿಯೇನಿಲ್ಲ. ನಾವು ಇದಕ್ಕೆ ಪರ್ಯಾಯ ಮಾರ್ಗ ಹುಡುಕಿದ್ದೇವೆ. ಅಂತೆಯೇ ಭಾರತಕ್ಕೆ ಈ ಕುರಿತ ತಕ್ಕ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಭಾರತ ಸರ್ಕಾರ ರಫ್ತು ನಿಷೇಧಿಸಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗಾಗಿ ಅಮೆರಿಕ ಸೇರಿದಂತೆ ವಿಶ್ವದ ೩೦ಕ್ಕೂ ಅಧಿಕ ರಾಷ್ಟ್ರಗಳು ಭಾರತಕ್ಕೆ ದುಂಬಾಲು ಬೀಳುತ್ತಿವೆ. ಈ ಹಿಂದೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ ಮಾಡುವಂತೆ ಮನವಿ ಮಾಡಿದ್ದರು. ಟ್ರಂಪ್ ಬಳಿಕ ಇದೀಗ ೩೦ ರಾಷ್ಟ್ರಗಳ ಪ್ರಧಾನಿಗಳು ಮೋದಿ ಅವರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ರಫ್ತು ಮಾಡುವಂತೆ ಮನವಿ ಮಾಡಿವೆ. ಕೊರೋನಾ ವೈರಸ್ ಗೆ ರಾಮಬಾಣವಾಗಿ ಮಲೇರಿಯಾ ಔಷಧ ಕೆಲಸ ಮಾಡುತ್ತದೆ ಎಂದು ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿಗೆ ನಿಷೇಧ ಹೇರಿತ್ತು , ಆದರೆ ಜಾಗತಿಕವಾಗಿ ಹರಡುತ್ತಿರುವ ಮಹಾ ಮಾರಿಯ ವಿರುದ್ಧ ಹೋರಾಟಕ್ಕೆ ಕೈಜೋಡಿಸುವ ಉದ್ದೇಶದಿಂದ ನಾವು ಈ ಔಷಧಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಕೇಂದ್ರ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ