ನವದೆಹಲಿ:
ಖಾಸಗಿ ರೈಲು ಸಂಸ್ಥೆಗಳು ದೇಶದಲ್ಲಿ ರೈಲು ಸೇವೆ ಆರಂಭಿಸಿದ ಮೇಲೆ, ರೈಲು ಪ್ರಯಾಣದ ದರ ನಿಗದಿ ಮಾಡುವ ಸ್ವಾತಂತ್ರ್ಯವನ್ನು ಅವುಗಳಿಗೇ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಖಾಸಗಿ ಸಂಸ್ಥೆಗಳಿಗೆ ರೈಲು ಸೇವೆ ಒದಗಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಖಾಸಗಿ ರೈಲು ಸಂಚಾರ ಆರಂಭವಾಗಲಿದೆ.
ಒಮ್ಮೆ ಖಾಸಗಿ ಸಂಸ್ಥೆಗಳು ರೈಲು ಸೇವೆ ಆರಂಭಿಸಿದ ಮೇಲೆ ಪ್ರಯಾಣಿಕರ ದರ ನಿಗದಿ ಮಾಡಲು ಆಯಾ ಸಂಸ್ಥೆಗಳಿಗೆ ಪೂರ್ಣ ಅಧಿಕಾರ ಕೊಡಲಾಗುವುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ.ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್, ಖಾಸಗಿ ರೈಲುಗಳ ಓಡಾಟ ಆರಂಭವಾದ ಮೇಲೆ ದರ ನಿಗದಿ ಸ್ವಾತಂತ್ರ್ಯವನ್ನೂ ಅವರಿಗೇ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು .ಭಾರತದಲ್ಲಿ ಖಾಸಗಿ ಹವಾನಿಯಂತ್ರಿತ ಬಸ್ಸುಗಳು ಹಾಗೂ ವಿಮಾನಯಾನ ಸಂಸ್ಥೆಗಳು ಕೂಡ ತಮ್ಮದೇ ಆದ ದರ ನಿಗದಿ ಮಾಡುವ ಸ್ವಾತಂತ್ರ್ಯವನ್ನು ಹೊಂದಿವೆ. ಆದರೆ ಅವು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ದರ ನಿಗದಿ ಮಾಡುತ್ತವೆ. ಅದೇ ರೀತಿ ಭವಿಷ್ಯದ ಖಾಸಗಿ ರೈಲು ಸಂಸ್ಥೆಗಳೂ ಕೂಡ ಪ್ರಯಾಣಿಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡಲಿವೆ ಎಂದು ವಿ.ಕೆ. ಯಾದವ್ ಭರವಸೆ ವ್ಯಕ್ತಪಡಿಸಿದ್ದಾರೆ.
ರೈಲು ದರ ನಿಗದಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ದರ ಏರಿಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಅನೇಕ ಪ್ರಸಂಗಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ರೈಲು ಸಂಸ್ಥೆಗಳೂ ಅತ್ಯಂತ ವಿವೇಚನೆಯಿಂದ ದರ ನಿಗದಿ ಮಾಡಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಭಾರತದಲ್ಲಿ ಪ್ರಯಾಣಿಕ ರೈಲುಗಳು ಅತ್ಯಂತ ಜನಪ್ರಿಯ ಸಂಚಾರ ಸಾಧನವಾಗಿದ್ದು, ಪ್ರತಿ ದಿನಕ್ಕೆ ಸುಮಾರು ಆಸ್ಟ್ರೇಲಿಯಾದ ಜನಸಂಖ್ಯೆಯಷ್ಟು ಅಗಾಧ ಪ್ರಮಾಣದ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುತ್ತವೆ.ಈ ಜನಪ್ರಿಯ ಸಂಚಾರ ಸಾಧನದ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರ, ಪ್ರಯಾಣಿಕರ ದರ ನಿಗದಿ ಸ್ವಾತಂತ್ರ್ಯವನ್ನೂ ಖಾಸಗಿ ರೈಲು ಸಂಸ್ಥೆಗಳಿಗೆ ನೀಡಿರುವುದು ಕುತೂಹಲ ಕೆರಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ