ನವದೆಹಲಿ:
ಕಳೆದ 21 ದಿನಗಳಿಂದ ಕೊರೋನಾ ತಡೆಯಲು ವಿಧಿಸಿದ್ದ ಲಾಕ್ ಡೌನ್ ನಾಳೆ ಮುಗಿಯುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು, ಸರ್ಕಾರದ ಇಲಾಖೆಗಳ ಜಂಟಿ ಕಾರ್ಯ ದರ್ಶಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ತಮ್ಮ ಗೃಹ ಕಛೇರಿಗಳಿಂದಲೇ ಕಾರ್ಯನಿರ್ವಹಿಸಿದ್ದು ಇಂದಿನಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ .
ಅಗತ್ಯ ಸೇವೆಗಳ ಇಲಾಖೆಗಳ ಸರ್ಕಾರಿ ನೌಕರರು, ಕೇಂದ್ರ ಸಚಿವರುಗಳು ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪ್ರಧಾನ ಮಂತ್ರಿಗಳು ಕಳೆದ ವಾರ ನೀಡಿದ್ದ ಆದೇಶ ಮೇರೆಗೆ ಆಯಾ ಇಲಾಖೆಗಳಿಗೆ ಸಂಬಂಧಿಸಿದ ಸಚಿವರುಗಳು, ಅಧಿಕಾರಿಗಳು ಇಂದು ಕಚೇರಿಗೆ ಹಾಜರಾಗಿದ್ದರು.
ಕೇಂದ್ರ ಸರ್ಕಾರದ ಪ್ರತಿ ಸಚಿವಾಲಯದ ಅಗತ್ಯ ಸೇವೆಗಳ ಇಲಾಖೆಗಳ ಮೂರನೇ ಒಂದು ಭಾಗದಷ್ಟು ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ನ ನಿಯಮಗಳ ಮಿತಿಯ ನಡುವೆ ಇಂದು ಕರ್ತವ್ಯಕ್ಕೆ ಹಾಜರಾಗಿ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂತು.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಮ್ಮ ಕನಿಷ್ಠ ಅಗತ್ಯ ಸಿಬ್ಬಂದಿಯೊಂದಿಗೆ ಸಂಸತ್ತಿನ ಉತ್ತರ ಬ್ಲಾಕ್ ನಲ್ಲಿರುವ ಕಚೇರಿಗೆ ಆಗಮಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೊಟ್, ಕ್ರೀಡಾ ಸಚಿವ ಕಿರಣ್ ರಿಜಿಜು, ಬುಡಕಟ್ಟು ಇಲಾಖೆ ಸಚಿವ ಅರ್ಜುನ್ ಮುಂಡಾ ಸಹ ಇಂದು ತಮ್ಮ ತಮ್ಮ ಕಚೇರಿಗಳಿಗೆ 19 ದಿನಗಳ ವಿರಾಮದ ಬಳಿಕ ಆಗಮಿಸಿದರು. ಈ ಸಚಿವರುಗಳೆಲ್ಲ ಲಾಕ್ ಡೌನ್ ಘೋಷಣೆಯಾದ ನಂತರ ತಮ್ಮ ಕಚೇರಿಗಳಿಂದಲೇ ಕೆಲಸ ಮಾಡುತ್ತಿದ್ದರು.
ಪ್ರಧಾನಿಯವರ ನಿರ್ದೇಶನ ಮೇರೆಗೆ ಎಲ್ಲಾ ಸಚಿವರು ಕೆಲಸ ಆರಂಭಿಸಿದ್ದಾರೆ ಎಂದು ಗೆಹ್ಲೊಟ್ ತಿಳಿಸಿದರು. ಸಂಸತ್ತಿನ ನಾರ್ತ್ ಬ್ಲಾಕ್, ಸೌತ್ ಬ್ಲಾಕ್, ಶಾಸ್ತ್ರಿ ಭವನ್ ಗಳಲ್ಲಿರುವ ತಮ್ಮ ಕಚೇರಿಗಳಿಗೆ ಹೋಗುವ ಮೊದಲು ಸಚಿವರುಗಳು ಮತ್ತು ಸಿಬ್ಬಂದಿ ಥರ್ಮಲ್ ಸ್ಕಾನಿಂಗ್ ಗೊಳಪಟ್ಟಿದ್ದು ಕಂಡುಬಂತು.
