ಮಳೆ ಹಾನಿ ಪರಿಹಾರಕ್ಕೆ ಪಿಎಂಗೆ ಸಿಎಂ ಮನವಿ..!

ನವದೆಹಲಿ

     ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಸಂಕಷ್ಟದಲ್ಲಿರುವ ಜನತೆಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ನ್ನು ಒತ್ತಾಯಿಸಿದ್ದಾರೆ.

    ಮೂರು ದಿನಗಳ ದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ ಇಂದು ಬೆಳಿಗ್ಗೆ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.ಸಂಸತ್ ಭವನದಲ್ಲಿ ಸುಮಾರು 15 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಯಡಿಯೂರಪ್ಪ, ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಪ್ರವಾಹದಿಂದಾಗಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹೀಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯಿಂದ ಅಗತ್ಯ ಪ್ರಮಾಣದಲ್ಲಿ ನೆರವು ಬಿಡುಗಡೆ ಮಾಡಬೇಕು, ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿಧಿ ಕುರಿತ ನಿಯಮಗಳಲ್ಲಿ ಬದಲಾವಣೆ ತಂದು ಸಂಕಷ್ಟದಲ್ಲಿರುವವರಿಗೆ ಹೆಚ್ಚಿನ ನೆರವು ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಹಾಗೂ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ರಾಜ್ಯದ ಅತ್ಯಂತ ಪ್ರಮುಖ ಯೋಜನೆಗಳಗಿವೆ. ಹೀಗಾಗಿ ಇವುಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿದರು.

    ಗೋವಾ ರಾಜ್ಯದೊಂದಿಗೆ ವಿವಾದದ ಸ್ವರೂಪದಲ್ಲಿರುವ ಕಳಸಾ-ಬಂಡೂರಿ ನಾಲಾ ಯೋಜನೆಯಲ್ಲಿ ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಂತೆ ತನ್ನ ಪಾಲಿನ ನೀರು ಬಳಸಿಕೊಳ್ಳಲು ಕಳಸಾ ಬಂಡೂರಿ ನಾಲಾ ಯೋಜನೆಗೆ ಪರಿಸರ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಅನುಮೋದನೆಗಳನ್ನು ನೀಡಬೇಕು ಎಂದು ಸಹ ಯಡಿಯೂರಪ್ಪ ಮೋದಿ ಅವರನ್ನು ಕೋರಿದರು.

    ಇದಲ್ಲದೇ ತಮಿಳುನಾಡಿನ ಜತೆ ವಿವಾದ ಉಂಟಾಗಿರುವ ಕಾವೇರಿ ನದಿ ಪಾತ್ರದ ಮೇಕೆದಾಟು ಯೋಜನೆ ರಾಜ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಕಾವೇರಿ ನ್ಯಾಯಾಧೀಕರಣದಂತೆ ತನ್ನ ಪಾಲಿನ ನೀರು ಬಳಸಿಕೊಳ್ಳಲು ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಿಸುವ ಮೇಕೆದಾಟು ಯೋಜನೆಗೆ ಎಲ್ಲಾ ರೀತಿಯ ಅನುಮತಿ ಹಾಗೂ ಅನುಮೋದನೆ ನೀಡಿದರೆ, ರಾಜ್ಯಕ್ಕೆ ಮಂಜೂರಾಗಿರುವ ನೀರಿನ ಪ್ರಮಾಣ ಸದ್ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

   ದೇಶದ ತಾಂತ್ರಿಕ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ನವೆಂಬರ್ 19ರಂದು ಬೆಂಗಳೂರು ಟೆಕ್ ಸಮ್ಮಿಟ್ ನಡೆಯುತ್ತಿದ್ದು, ವರ್ಚುವಲ್ ವೇದಿಕೆ ಮೂಲಕ ಈ ಸಮ್ಮೇಳನ ಉದ್ಘಾಟಿಸುವಂತೆಯೂ ಮೋದಿ ಅವರಿಗೆ ಯಡಿಯೂರಪ್ಪ ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap