ಮುಂಬೈ:
ವಿಶ್ವದೆಲ್ಲೆಡೆ ಭಾರಿ ಸಂಚಲನ ಮೂಡಿಸಿರು ಮಾರಣಾಂತಿಕ ಕೊರೋನಾ ವೈರಸ್ ಇದೀಗ ಭಾರತದಲ್ಲಿಯೂ ಕಾಲಿಟ್ಟಿರುವ ಸಂಶಯಗಳು ವ್ಯಕ್ತವಾಗಿವೆ ವಾಣಿಜ್ಯ ನಗರಿ ಮುಂಬೈನಲ್ಲಿ ಚೀನಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಇಬ್ಬರಲ್ಲಿಯೂ ಕೊರೋನಾ ವೈರಸ್ ಇರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ವಿಶೇಷ ಕೊಠಡಿ ಸ್ಥಾಪನೆ ಮಾಡಿ ತಪಾಸಣೆ ನಡೆಸಲಾಗುತ್ತಿದೆ ಎಂದು ಬಿಎಂಸಿ ಮಾಹಿತಿ ನೀಡಿದೆ.
ಚೀನಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳ ಆರೋಗ್ಯವನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಇಬ್ಬರು ವ್ಯಕ್ತಿಗಳಲ್ಲಿ ಕೆಮ್ಮು ಹಾಗೂ ಶೀತದಂತ ಕೊರೋನಾ ವೈರಸ್ ಗುಣಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಬಿಎಂಸಿ ಆರೋಗ್ಯಾಧಿಕಾರಿ ಡಾ.ಪದ್ಮಜಾ ಕೆಸ್ಕರ್ ತಿಳಿಸಿದ್ದಾರೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚೀನಾದಿಂದ ಬರುವ ಪ್ರವಾಸಿಗರನ್ನು ವಿಶೇಷ ಕೊಠಡಿಗೆ ಕಳುಹಿಸಿ ಆರೋಗ್ಯ ತಪಾಸಣೆ ನಡೆಸುವಂತೆಯೂ ನಿಲ್ದಾಣದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ. ಚೀನಾದಿಂದ ಬರುವ ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದೇ ಆದರೆ, ಕೂಡಲೇ ಮಾಹಿತಿ ನೀಡುವಂತೆಯೂ ನಗರದ ಎಲ್ಲಾ ಖಾಸಗಿ ವೈದ್ಯರಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ವೈರಸ್ ವೊಂದು ಜಾತಿಯ ಮಾರಣಾಂತಿಕ ವೈರಸ್ ಆಗಿದ್ದು ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ . ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್’ಗೆ ಕೊರೋನಾ ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ. ಸೋಂಕು ತಗುಲಿದವರು ತೀವ್ರ ಶೀತ, ಕೆಮ್ಮು, ಗಂಟಲು ಕಟ್ಟುವಿಕೆ, ಉಸಿರಾಟದ ತೊಂದರೆ, ತಲೆನೋವು, ಜ್ವರದ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ