ನವದೆಹಲಿ
ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನಡುವೆ ಆರೋಪ ಪ್ರತ್ಯಾರೋಪ ತೀವ್ರಗೊಂಡಿರುವ ಬೆನ್ನೆಲ್ಲೇ ಮಾಜಿ ಸಚಿವ ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಲಾಬಿ ನಡೆಸುತ್ತಿದ್ದಾರೆ
ಸಿದ್ದರಾಮಯ್ಯ ಅವರಿಗೆ ವಿಧಾನಸಭೆ ಪ್ರತಿಪಕ್ಷ ಹುದ್ದೆ ತಪ್ಪಿಸುವ, ಪಕ್ಷದಲ್ಲಿ ಅವರ ಹಿಡಿತ ಕಡಿಮೆ ಮಾಡುವ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಾವೇ ಪಡೆದುಕೊಳ್ಳುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್ ವರಿಷ್ಠರ ಮೇಲೆ ಪ್ರಭಾವ ಬೀರುವ ಯತ್ನದಲ್ಲಿ ನಿರತರಾಗಿದ್ದಾರೆ
ರಾಜಧಾನಿಯಲ್ಲಿ ಶನಿವಾರ ಅಪರಾಹ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿದ ಶಿವಕುಮಾರ್, ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಸಹ ಆರೋಪಿಸಿರುವುದಾಗಿ ತಿಳಿದು ಬಂದಿದೆ.
ಎರಡು ದಿನಗಳಿಂದ ದೆಹಲಿಯಲ್ಲಿರುವ ಡಿ ಕೆ ಶಿವಕುಮಾರ್, ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಿರುವ ತುರ್ತು ಕ್ರಮಗಳ ಬಗ್ಗೆಯೂ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.ತಮ್ಮ ದೆಹಲಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಶಿವಕುಮಾರ್, ತಾವು ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಲಾಬಿ ಮಾಡಲು ಬಂದಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಅನಗತ್ಯವಾಗಿ ತಮ್ಮ ಹೆಸರು ಪ್ರಸ್ತಾಪಿಸಲಾಗುತ್ತಿದೆ ಎಂದರು.ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಆರೋಪ, ಪ್ರತ್ಯಾರೋಪ ಕುರಿತಂತೆ ಪ್ರತಿಕ್ರಿಯೆ ನೀಡಲು ಶಿವಕುಮಾರ್ ನಿರಾಕರಿಸಿದರು. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರು, ದೇವೇಗೌಡರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು. ದೊಡ್ಡವರ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತೇನೆ ಎಂದರು.
ಪಕ್ಷದಲ್ಲಿ ನಾವಿನ್ನು ಸಾಮಾನ್ಯ ಕಾರ್ಯಕರ್ತರು. ತೀರ್ಮಾನ ಮಾಡುವ ಹಂತಕ್ಕೆ ಬೆಳೆದಿಲ್ಲ. ಒಟ್ಟಿಗೆ ಒಂದೇ ಸರ್ಕಾರದಲ್ಲಿ ಕೆಲಸ ಮಾಡಿದ್ದೇವೆ. ಸರ್ಕಾರದಲ್ಲಿ ಕುಮಾರ ಸ್ವಾಮಿ ಅವರಿಗೆ ಕಿರುಕುಳವಾಗಿರುವ ಬಗ್ಗೆ ಮುಂಬರುವ ದಿನಗಳಲ್ಲಿ ಚರ್ಚೆ ಮಾಡೋಣ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ