ನವದೆಹಲಿ:
ಮಾರಕ ಕೊರೋನಾ ವೈರಸ್ ದೇಶಾದ್ಯಂತ ತನ್ನ ಅಬ್ಬರ ಮುಂದುವರೆಸಿರುವಂತೆಯೇ ಇತ್ತ ಭಾರತ ಕೋವಿಡ್-19 ಪರೀಕ್ಷಾ ಟೆಸ್ಟ್ ಕಿಟ್ ಗಳಿಗಾಗಿ ಚೀನಾವನ್ನು ಆಶ್ರಯಿಸುವಂತಾಗಿತ್ತು. ಆದರೆ ಇದೀಗ ದೆಹಲಿ ಐಐಟಿ ವಿಭಾಗದ ಸದಸ್ಯರು ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷಾ ಕಿಟ್ ತಯಾರಿಸಿ ಚೀನಾಗೆ ಸಡ್ಡು ಹೊಡೆದಿದ್ದಾರೆ.
ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ಕಾರಣಕ್ಕೆ ಸೋಂಕು ಪರೀಕ್ಷೆಗೆ ಬಳಕೆ ಮಾಡಲಾಗುವ ಪರೀಕ್ಷಾ ಕಿಟ್ ಗಳೂ ಕೂಡ ಯಥೇಚ್ಛವಾಗಿ ಬೇಕಾಗಿದೆ. ಇಂತಹ ಕಿಟ್ ಗಳನ್ನು ಚೀನಾದಲ್ಲಿ ಹೆಚ್ಚು ತಯಾರಿಸಲಾಗುತ್ತಿದ್ದು, ವೈದ್ಯಕೀಯ ವಲಯದಲ್ಲಿರುವ ಪ್ರಮುಖ ದೇಶಗಳೇ ಕೊರೋನಾ ವೈರಸ್ ಟೆಸ್ಟ್ ಕಿಟ್ ಗಳಿಗಾಗಿ ಚೀನಾವನ್ನು ಅವಲಂಭಿಸಿವೆ.
ಭಾರತ ಕೂಡ ಚೀನಾವನ್ನು ಅವಲಂಭಿಸಿದೆ. ಆದರೆ ಇತ್ತೀಚೆಗೆ ಚೀನಾದಿಂದ ಬರುತ್ತಿರುವ ಕಿಟ್ ಗಳು ಕಳಪೆಯಾಗಿದೆ ಎಂಬ ಗಂಭೀರ ಆರೋಪ ಕೂಡ ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಭಾರತದಲ್ಲಿ ಈ ಪರೀಕ್ಷಾ ಕಿಟ್ ಗಳ ತಯಾರಿಕೆ ಕಾರ್ಯ ನಡೆಯುತ್ತಿದ್ದು, ಈ ಪೈಕಿ ದೆಹಲಿ ಐಐಟಿ ವಿಭಾಗದ ಸದಸ್ಯರು ಮಹತ್ವದ ಮುನ್ನಡೆ ಸಾಧಿಸಿದ್ದಾರೆ. ಐಐಟಿ ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್‌ನ ಸಂಶೋಧಕರು ತಯಾರಿಸಿದ ಈ ಕಿಟ್ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.