ಸಚಿನ್ ಪೈಲಟ್ ಬಣದ ಶಾಸಕರಿಗೆ ಕಾಡುತ್ತಿದೆ ಅನರ್ಹತೆ ಭೀತಿ…!

ಜೈಪುರ:

     ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ಸಚಿನ್‌ ಪೈಲಟ್‌ ಮತ್ತು ಅವರ ಬಣದ ಇತರ ಶಾಸಕರಿಗೆ ರಾಜಸ್ಥಾನ ವಿಧಾನಸಭೆ ಸ್ಪೀಕರ್‌ ಸಿ.ಪಿ. ಜೋಶಿ ಬುಧವಾರ ನೋಟಿಸ್‌ ಜಾರಿ ಮಾಡಿದ್ದಾರೆ. ಇವರೆಲ್ಲರೂ ಸೋಮವಾರ ಮತ್ತು ಮಂಗಳವಾರ ನಡೆದಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು.ಮಂಗಳವಾರ ಸಚಿನ್‌ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್‌ ವಜಾ ಮಾಡಿತ್ತು. ಜೊತೆಗೆ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಕೈ ಪಾಳಯ ಅವರನ್ನೆಲ್ಲಾ ಅನರ್ಹಗೊಳಿಸಲು ಮುಂದಾಗಿದೆ.

      ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ಸಚಿನ್‌ ಪೈಲಟ್‌ ಸೇರಿ ಎಲ್ಲಾ ಶಾಸಕರಿಗೂ ಸ್ಪೀಕರ್‌ ಮೂಲಕ ಅನರ್ಹತೆಯ ನೋಟಿಸ್‌ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನ ಉಸ್ತುವಾರಿ ಅವಿನಾಶ್‌ ಪಾಂಡೆ ಬುಧವಾರ ಹೇಳಿದ್ದಾರೆ.

      ಎಲ್ಲಾ ಶಾಸಕರನ್ನು ವಜಾ ಮಾಡುವಂತೆ ಕಾಂಗ್ರೆಸ್‌ ಪಕ್ಷ ಸ್ಪೀಕರ್‌ಗೆ ಮನವಿ ಸಲ್ಲಿಸಿದೆ. ಸ್ಪೀಕರ್‌ ಶುಕ್ರವಾರದ ಒಳಗೆ ಉತ್ತರಿಸುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ. ಶಾಸಕರ ಉತ್ತರ ಸಮರ್ಪಕವಾಗಿ ಇಲ್ಲದಿದ್ದಲ್ಲಿ, ಮುಂದಿನ ಕ್ರಮದ ಬಗ್ಗೆ ಸ್ಪೀಕರ್‌ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಚಿನ್‌ ಪೈಲಟ್‌ ಸೇರಿ ಕಾಂಗ್ರೆಸ್‌ನ ಒಟ್ಟು 19 ಶಾಸಕರು ಸಿಎಲ್‌ಪಿ ಸಭೆಗೆ ಗೈರು ಹಾಜರಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ