ಮುಂಬೈ
ಆಯೋಧ್ಯೆಯ ಶ್ರೀ ರಾಮ ಮಂದಿರ ಭೂಮಿ ಪೂಜೆ ಸಂದರ್ಭದಲ್ಲಿ ಶ್ರೀರಾಮಮಂದಿರ ತೀರ್ಥ ಕ್ಷೇತ್ರ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನೃತ್ಯ ಗೋಪಾಲ್ ದಾಸ್ ಅವರ ಜತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಕ್ವಾರಂಟೈನ್ ಗೆ ತೆರಳಲಿದ್ದಾರೆಯೇ? ಎಂದು ಶಿವಸೇನೆ ಪ್ರಶ್ನಿಸಿದೆ.
ಪ್ರಧಾನಿ ಮೋದಿ ಕ್ವಾರಂಟೈನ್ ನಿಬಂಧನೆಗಳನ್ನು ಪಾಲಿಸಲಿದ್ದಾರಾ? ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಸಂಸದ ಸಂಜಯ್ ರಾವತ್ ವ್ಯಗ್ರವಾಗಿ ಪ್ರಶ್ನಿಸಿದ್ದಾರೆ. ಆಗಸ್ಟ್ 5 ರಂದು ನಡೆದ ಆಯೋಧ್ಯ ರಾಮ ಮಂದಿರ ಭೂಮಿ ಪೂಜೆಯಲ್ಲಿ ಸಂತ ಮಹಂತ ನೃತ್ಯ ಗೋಪಾಲ್ ದಾಸ್ ಪಾಲ್ಗೊಂಡಿದ್ದರು. ಅವರು ಮುಖ ಗವುಸು ಧರಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೋದಿ ಭಕ್ತಿಯಿಂದ ಗೋಪಾಲ್ ದಾಸ್ ಅವರ ಕೈಗಳನ್ನೂ ಕೂಡ ಸ್ಪರ್ಶಿಸಿದ್ದರು. ಹಾಗಾಗಿ ಮೋದಿ ಕೂಡಾ ಸ್ವಯಂ ನಿರ್ಬಂಧಕ್ಕೆ ಒಳಗಾಗಬೇಕು ಎಂದು ರಾವತ್ ಹೇಳಿದ್ದಾರೆ.
ಅಮಿತ್ ಶಾ ಅವರಿಗೆ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಐಸೊಲೇಷನ್ ನಲ್ಲಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಕ್ಯಾಬಿನೆಟ್ ಸದಸ್ಯರು, ಅಧಿಕಾರಿಗಳು, ಸಂಸತ್ ಸದಸ್ಯರು ಎಲ್ಲರೂ ಕೊರೋನಾ ಸೋಂಕಿನ ಕಾರಣ ಭಯಭೀತರಾಗಿದ್ದಾರೆ ಎಂದು ಶಿವಸೇನೆ ಸಂಪಾದಕೀಯದಲ್ಲಿ ಹೇಳಿದೆ.