ನವದೆಹಲಿ
ರಾಮ ಮಂದಿರದ ಕನಸು ಹೊತ್ತವರೆಲ್ಲಾ ಈ ಶುಭಘಳಿಗೆಯನ್ನು ಸಂಭ್ರಮಿಸುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ನಡೆದ ಚಳುವಳಿಯಲ್ಲಿ ಸಕ್ರಿಯರಾಗಿದ್ದ, ರಥಯಾತ್ರೆ ನಡೆಸಿದ್ದ ಮಾಜಿ ಉಪ ಪ್ರಧಾನಿ, ಗೃಹ ಸಚಿವ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಭೂಮಿ ಪೂಜೆ ಮುನ್ನಾ ದಿನ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ನನಗಷ್ಟೇ ಅಲ್ಲದೇ ಸಮಸ್ತ ಭಾರತೀಯರಿಗೆ ಆ.05 ಐತಿಹಾಸಿಕ ಹಾಗೂ ಭಾವನಾತ್ಮಕ ದಿನ ಎಂದು ಎಲ್ ಕೆ ಅಡ್ವಾಣಿ ಮಂದಿರ ಭೂಮಿ ಪೂಜೆ ಕಾರ್ಯಕ್ರಮವನ್ನು ಬಣ್ಣಿಸಿದ್ದಾರೆ. ರಾಮ ಜನ್ಮಭೂಮಿ ಚಳುವಳಿಯಲ್ಲಿ ವಿಧಿ ನನ್ನನ್ನು ಪ್ರಮುಖ ಪಾತ್ರ ನಿರ್ವಹಿಸುವಂತೆ ಮಾಡಿತ್ತು ಎಂದು ಅಡ್ವಾಣಿ ತಮ್ಮ ರಥಯಾತ್ರೆಯ ದಿನಗಳನ್ನು ಮೆಲುಕುಹಾಕಿದ್ದಾರೆ.
ನಾಳಿನ ಕಾರ್ಯಕ್ರಮವನ್ನು ಎಲ್ ಕೆ ಅಡ್ವಾಣಿ ನನ್ನ ಹೃದಯಕ್ಕೆ ಹತ್ತಿರವಾದ ಕನಸು ನನಸಾಗುತ್ತಿದೆ ಎಂದು ಹೇಳಿದ್ದಾರೆ. ರಾಮನ ಆದರ್ಶಗಳನ್ನು ಅವನ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದಕ್ಕೆ, ಸಂಪತ್ಭರಿತ ಭಾರತಕ್ಕೆ ಮಂದಿರ ಪ್ರೇರಣೆ ನೀಡಲಿದೆ ಎಂಬುದು ನನ್ನ ನಂಬಿಕೆ ಎಂದು ಎಲ್ ಕೆ ಅಡ್ವಾಣಿ ಹೇಳಿದ್ದಾರೆ.
