ನವದೆಹಲಿ:
ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕು ಹರಡಿರುವವರನ್ನು ಪತ್ತೆಹಚ್ಚುವ ಆರೋಗ್ಯ ಸೇತು ಆಪ್ ನ್ನು ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ನಾಳೆಯಿಂದ ಯಾರೇ ಆದರೂ ಕಚೇರಿಗೆ ಕೆಲಸಕ್ಕೆ ಹೋಗುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ನ್ನು ತಮ್ಮ ಮೊಬೈಲ್ ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.ಒಂದು ವೇಳೆ ಕಂಪೆನಿಯ ನೌಕರರು ಆಪ್ ಹೊಂದಿಲ್ಲದಿದ್ದರೆ ಅದರ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಲಾಗುವುದು. ಕಂಟೈನ್ ಮೆಂಟ್ ವಲಯಗಳಲ್ಲಿರುವ ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮನೆಯಿಂದಲೇ ಕೆಲಸ ಮಾಡುವವರು ಆಪ್ ನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ. ಮುಂದಿನ ಕೆಲವು ವಾರಗಳಲ್ಲಿ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವವರ ಸಂಖ್ಯೆ 30 ಕೋಟಿಗೆ ತಲುಪಬೇಕು ಎಂದು ಕೇಂದ್ರ ಸರ್ಕಾರ ಗುರಿ ಇಟ್ಟುಕೊಂಡಿದೆ.
ಏಪ್ರಿಲ್ ಆರಂಭದಲ್ಲಿ ಆರೋಗ್ಯ ಸೇತು ಆಪ್ ನ್ನು ಪರಿಚಯಿಸಿದ್ದ ಕೇಂದ್ರ ಸರ್ಕಾರ ಆರಂಭದಲ್ಲಿ ಇಚ್ಛೆಯಿರುವವರು ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿತ್ತು. ನಂತರ ಈ ಆಪ್ ನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಬಿಎಸ್ ಇಯಂತಹ ಶಿಕ್ಷಣ ಸಂಸ್ಥೆಗಳು ಆಪ್ ಬಳಕೆಗೆ ಪ್ರೋತ್ಸಾಹ ನೀಡಿದ್ದರು.