ಇಂದೋರ್:
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನಡೆಸಿದ ರೋಡ್ ಶೋ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ನವೆಂಬರ್ 3 ರಂದು ಉಪಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದೋರ್‌ನ ಸನ್ವೇರ್ ಪ್ರಾಂತ್ಯದಲ್ಲಿ ರೋಡ್ ಶೋ ನಡೆಸಿದ್ದರು. ಈ ವೇಳೆ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ರೋಡ್ ಶೋ ವೇಳೆ 20 ರಿಂದ 25 ವಾಹನಗಳಿದ್ದವು. ಈ ವೇಳೆ ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಅಲ್ಲದೇ ಹಲವರು ಮುಖಗವಸನ್ನು ಕೂಡ ಧರಿಸಿಲ್ಲ ಎಂದು ಚುನಾವಣಾಧಿಕಾರಿ ಪತ್ರದಲ್ಲಿ ಹೇಳಿದ್ಧಾರೆ. ಹಾಗಾಗಿ ರೋಡ್ ಶೋಗೆ ಅನುಮತಿ ಪಡೆದ ದಿನೇಶ್ ಬನ್ಸವಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.