ಹೊಸದಿಲ್ಲಿ:
ಕೋವಿಡ್ 19 ನಿಯಂತ್ರಣ ಕಾರ್ಯಕ್ಕೆ ನೆರವಾಗಲೆಂದು ರಚಿಸಲಾದ ‘ಪಿಎಂ ಕೇರ್ಸ್ ಫಂಡ್’ ಐದು ದಿನಗಳಲ್ಲಿ 3,076 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಸರಕಾರ ಬಹಿರಂಗಗೊಳಿಸಿರುವ ವರದಿ ತಿಳಿಸಿದೆ. ಆರ್ಥಿಕ ವರ್ಷ 2020ರ ಈ ಲೆಕ್ಕಪತ್ರದಲ್ಲಿ ಫಂಡ್ ಸ್ಥಾಪನೆಯಾದ ಮಾರ್ಚ್ 27ರಿಂದ ಮಾರ್ಚ್ 31ರ ತನಕದ ದೇಣಿಗೆಗಳನ್ನು ಮಾತ್ರ ಬಹಿರಂಗಗೊಳಿಸಲಾಗಿದೆ.
ಈ 3,076 ಕೋಟಿ ರೂ. ಪೈಕಿ ರೂ 3,075.85 ಕೋಟಿ ದೇಶೀಯ ಸ್ವಯಂಪ್ರೇರಿತ ದೇಣಿಗೆಯಾಗಿದ್ದರೆ 39.67 ಲಕ್ಷ ರೂ. ವಿದೇಶಿ ದೇಣಿಗೆಯಾಗಿದೆ. ಈ ಮಾಹಿತಿಯನ್ನು ‘ಪಿಎಂ ಕೇರ್ಸ್ ವೆಬ್ ಸೈಟ್’ ನಲ್ಲಿ ಅಪ್‍ಲೋಡ್ ಮಾಡಲಾಗಿದೆ.
ಈ ಕುರಿತು ಟ್ವೀಟ್ ಮಾಡಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಈ ಉದಾರ ದಾನಿಗಳ ಹೆಸರುಗಳನ್ನೇಕೆ ಬಹಿರಂಗ ಪಡಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ‘ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ದೇಣಿಗೆ ಪಡೆಯುವ ಪ್ರತಿಯೊಂದು ಎನ್‍ಜಿಒ ಹಾಗೂ ಟ್ರಸ್ಟ್ ತಮ್ಮ ದಾನಿಗಳ ಹೆಸರುಗಳನ್ನು ಕಡ್ಡಾಯವಾಗಿ ಬಹಿರಂಗ ಪಡಿಸಬೇಕಿದೆ. ಹಾಗಿರುವಾಗ ಪಿಎಂ ಕೇರ್ಸ್ ಫಂಡ್‍ಗೆ ಏಕೆ ಈ ವಿನಾಯಿತಿ?” ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ದೇಣಿಗೆ ನೀಡಿದವರ್ಯಾರು ಎಂದು ಗೊತ್ತು. ದೇಣಿಗೆ ನೀಡಿದವರ ಟ್ರಸ್ಟಿಗಳ ಬಗ್ಗೆಯೂ ಗೊತ್ತು ಹಾಗಿರುವಾಗ ಟ್ರಸ್ಟಿಗಳು ದೇಣಿಗೆ ನೀಡಿದವರ ಹೆಸರುಗಳನ್ನೇಕೆ ಬಹಿರಂಗಪಡಿಸಲು ಹೆದರುತ್ತಿದ್ದಾರೆ?” ಎಂದು ಚಿದಂಬರಂ ಕೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ