ನವದೆಹಲಿ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಇಡೀ ದೇಶದಲ್ಲಿ ರಾಜ್ಯದಲ್ಲಿ ಉತ್ತಮ ವಹಿವಾಟು ನಡೆದಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಜನೌಷಧಿ ಮಾರಾಟ ವಿಭಾಗದ ಪ್ರಮುಖರೊಂದಿಗೆ ವೆಬಿನಾರ್ ನಲ್ಲಿ ಮಾತನಾಡಿದ ಅವರು, ಜನರಿಗೆ ಅಗತ್ಯವಾಗಿರುವ ದೈನಂದಿನ ಔಷಧಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕರ್ನಾಟಕದಲ್ಲಿ ಕೋವಿಡ್-19 ಸಂದರ್ಭದಲ್ಲಿ ಜನೌಷಧಿ ಮಳಿಗೆಗಳು ಅತಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿವೆ. ಹೆಚ್ಚಿನ ವಹಿವಾಟು ನಡೆಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಯಾವುದೇ ಭಾಗದಲ್ಲಿ ಔಷಧಗಳ ಕೊರತೆಯಾಗದಂತೆ ಪೂರೈಕೆ ಮಾಡಲಾಗಿದ್ದು, ಇದೇ ಸಂದರ್ಭದಲ್ಲಿ ಔಷಧಗಳ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಹಿಳೆಯರ ಸ್ಯಾನಿಟರಿ ಪ್ಯಾಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸ್ಯಾನಿಟರಿ ನ್ಯಾಪ್ ಕಿನ್ ಮಾರಾಟ ಮಾಡುತ್ತಿದ್ದು, ಈ ಪ್ರಮಾಣವನ್ನು ಹೆಚ್ಚಿಸಲಾಗುವುದು. ಒಂದು ರೂಪಾಯಿಗೆ ಒಂದು ನ್ಯಾಪ್ ಕಿನ್ ಮಾರಾಟ ಮಾಡುವ ಯೋಜನೆ ಜಾರಿಯಲ್ಲಿದೆ ಎಂದು ಹೇಳಿದರು.
ಬರುವ ದಿನಗಳಲ್ಲಿ ದೇಶದಲ್ಲಿ 3 ಅತಿ ದೊಡ್ಡ ಔಷಧ ಪಾರ್ಕ್ ಗಳು ಹಾಗೂ 4 ವೈದ್ಯಕೀಯ ಸಾಧನಗಳ ಉತ್ಪಾದನಾ ಪಾರ್ಕ್ ಗಳ ನಿರ್ಮಾಣದಲ್ಲಿ ತೊಡಗಿದ್ದು, ಒಟ್ಟಾರೆ 13 ಸಾವಿರದ 600 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದು ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ