ಅಹಮದಾಬಾದ್:
ಪಟೇಲ್ ಸಮುದಾಯದ ಮುಂಚೂಣಿ ಹೋರಾಟಗಾರರಾದ ಹಾರ್ದಿಕ್ ಪಟೇಲ್ ಅವರು ಮೋದಿಯವರ ಚೌಕಿದಾರ್ ಕ್ಯಾಂಪೇನ್ ವಿರುದ್ಧವಾಗಿ ತಮ್ಮ ಟ್ವಿಟರ್ ಖಾತೆಯ ಹೆಸರನ್ನು ಬದಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿರುವ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನಕ್ಕೆ ಟಾಂಗ್ ನೀಡಿದ್ದಾರೆ. ಇತ್ತೀಚಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಹಾರ್ದಿಕ್ ಪಟೇಲ್, ತಮ್ಮ ಟ್ವಿಟರ್ ಖಾತೆಯನ್ನು ‘ಬೆರೋಜ್ಗರ್ ಹಾರ್ದಿಕ್ ಪಟೇಲ್ ‘ಎಂದು ಬದಲಾಯಿಸಿಕೊಂಡಿದ್ದಾರೆ.
ಬೇರೊಜ್ಗರ್ ಎಂದರೆ ನಿರುದ್ಯೋಗಿ ಎಂದರ್ಥ.ಪ್ರತಿಪಕ್ಷಗಳ ಚೌಕಿದಾರ್ ಚೋರ್ ಹೈ ಟೀಕೆಯನ್ನೇ ಅಸ್ತ್ರವನ್ನಾಗಿಟ್ಟು ಕೊಂಡು ಪ್ರಧಾನಿ ನರೇಂದ್ರ ಮೋದಿ ‘ ಮೈನ್ ಬೀ ಚೌಕಿದಾರ್’ ಎಂದು ಟ್ವಿಟರ್ ಖಾತೆಯನ್ನು ಬದಲಾಯಿಸಿಕೊಂಡಿದ್ದರು.ಬಿಜೆಪಿ ಸಮಾವೇಶಗಳಲ್ಲಿ ತಮ್ಮನ್ನು ದೇಶ ಕಾಯುವ ಕಾವಲುಗಾರ ಎಂದು ಪ್ರಧಾನಿ ಮೋದಿ ಹೇಳಿಕೊಳ್ಳುತ್ತಿದ್ದರು. ಮೈನ್ ಬೀ ಪ್ರಚಾರಾಂದೋಲನದಲ್ಲಿ ಬಿಜೆಪಿ ನಾಯಕರು, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಚೌಕಿದಾರ್ ಎಂದು ಸೇರ್ಪಡೆ ಮಾಡಿಕೊಂಡಿದ್ದರು.