ನವದೆಹಲಿ:
ಗುಜರಾತ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಾಟಿದಾರ್ ಮುಖಂಡ ಹಾರ್ದಿಕ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. ಹಾರ್ದಿಕ್ ಪಟೇಲ್ ನೇಮಕಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಕಿತ ಹಾಕಿರುವುದಾಗಿ ಅಧಿಕೃತ ಮಾಹಿತಿ ಬಂದಿರುವುದಾಗಿ ಪಕ್ಷ ತಿಳಿಸಿದೆ.
26 ವರ್ಷದ ಪಟೇಲ್, 2015ರಲ್ಲಿ ಪಾಟೀದರ್ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಹೋರಾಟದ ನೇತೃತ್ವ ವಹಿಸುವ ಮೂಲಕ ಯುವ ಮುಖಂಡರಾಗಿ ಹೊರಹೊಮ್ಮಿದ್ದರು. ಕಳೆದ ವರ್ಷ ಕಾಂಗ್ರೆಸ್ ಪಕ್ಷ ಸೇರಿದ್ದರು. ಪ್ರಕರಣವೊಂದರಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಗಿರಲಿಲ್ಲ.
ಪ್ರಸ್ತುತ ಅಮಿತ್ ಚೌದಾ ಗುಜರಾತ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದು, ತುಷಾರ್ ಚೌದರಿ ಹಾಗೂ ರಸಂದಾಸ್ ಸೋನೆರಿ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಇದೀಗ ಹಾರ್ದಿಕ್ ಪಟೇಲ್ ಅವರನ್ನೂ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.