ನವದೆಹಲಿ:
ಗಾಲ್ವಾನ್ ಕಣಿವೆಯ ಪೆಟ್ರೋಲಿಂಗ್ ಗಸ್ತು ಕೇಂದ್ರ 14 ರಿಂದ ಚೀನಾದ ಸೇನಾ ಪಡೆ ಹಿಂದೆ ಸರಿದ ನಂತರ ಹೆಚ್ಚಿನ ಬದಲಾವಣೆಯಾಗಿಲ್ಲವಾದ್ದರಿಂದ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ಹಾಗೆಯೇ ಉಳಿದುಕೊಂಡಿದೆ.
ಸೇನಾಪಡೆಯನ್ನು ಹಿಂತೆಗೆದುಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿದ್ದರೂ ಕೂಡ ಗೊಗ್ರಾ ಹಾಟ್ ಸ್ಪ್ರಿಂಗ್ ಮತ್ತು ಫಿಂಗರ್ 4ಗಳಿಂದ ಚೀನಾಪಡೆ ಕೇವಲ ಒಂದು ಭಾಗದ ಪಡೆಯನ್ನು ಮಾತ್ರ ಹಿಂತೆಗೆದುಕೊಂಡಿದೆ, ಡೆಪ್ಸಾಂಗ್ ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಫಿಂಗರ್ 4 ಬಗ್ಗೆ ಸ್ಪಷ್ಟನೆ ನೀಡಿರುವ ಸೇನಾ ಮೂಲಗಳು, ಪಾಂಗೊಂಗ್ ಟ್ಸೊನ ಉತ್ತರ ತೀರದಿಂದ ಫಿಂಗರ್ 8ರವರೆಗೆ ಗಸ್ತು ನಿಯೋಜಿಸಲಾಗಿದೆ ಮತ್ತು ಚೀನಾದ ಪಡೆ ಫಿಂಗರ್ 4ರ ಹತ್ತಿರ ಬರುತ್ತದೆ.
ಆದರೆ ಅಲ್ಲಿ ಪ್ರದೇಶವನ್ನು ವಶಪಡಿಸಿಕೊಳ್ಳಲು ಯಾರೂ ಪ್ರಯತ್ನ ನಡೆಸುತ್ತಿಲ್ಲ. ನಾವು ಎಲ್ಲಾ 5 ಪಾಯಿಂಟ್ ಗಳಲ್ಲಿ ಗಸ್ತು ತಿರುಗುತ್ತಿದ್ದೆವು, ಅದಕ್ಕೆ ಈಗ ಚೀನಾ ತಡೆಯೊಡ್ಡುತ್ತಿದೆ, ಡೆಪ್ಸಾಂಗ್ ಅತಿ ಪ್ರಮುಖ ಕೇಂದ್ರವಾಗಿದ್ದು ಭಾರತ, ಚೀನಾ ಪಡೆಯನ್ನು ಹಿಂದೆ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳುತ್ತವೆ.
ಚೀನಾ ಸರ್ಕಾರದ ದ್ವಂದ್ವ ನಿಲುವಿನಿಂದಾಗಿ ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. “ಮ್ಯಾಕ್ ಮಹೊನ್ ರೇಖೆಯನ್ನು ಆಧರಿಸಿ ಚೀನಿಯರು ಮ್ಯಾನ್ಮಾರ್‌ನೊಂದಿಗಿನ ತಮ್ಮ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ಆದರೆ ಭಾರತದ ವಿಚಾರದಲ್ಲಿ ತಿರಸ್ಕರಿಸಿದ್ದಾರೆ. ಸಿಕ್ಕಿಂ ಕಡೆಗೆ ಡೋಕ್ಲಂನ 1890ರ ಒಪ್ಪಂದವನ್ನು ಉಲ್ಲೇಖಿಸುತ್ತಾರೆ, ಆದರೆ ಟಿಬೆಟ್ ಮತ್ತು ಬ್ರಿಟಿಷ್ ಭಾರತದ ನಡುವಿನ ಒಪ್ಪಂದದ ಬಗ್ಗೆ ಕಡೆಗಣಿಸುತ್ತದೆ ಎಂದು ರಕ್ಷಣಾ ವಿಶ್ಲೇಷಕ ಮೇ.ಜನರಲ್ (ನಿವೃತ್ತ)ಎಸ್ ಬಿ ಅಸ್ತಾನಾ ಹೇಳುತ್ತಾರೆ.
ಚೀನಾ 1993ರಿಂದ ಭಾರತದೊಂದಿಗೆ ಎಲ್ಲಾ ವಿಶ್ವಾಸಾರ್ಹ ಕ್ರಮಗಳನ್ನು ಉಲ್ಲಂಘಿಸಿದೆ. ಮೇ ಮೊದಲ ವಾರದಲ್ಲಿ ಫಿಂಗರ್ 4 ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಉಲ್ಲಂಘನೆಯಾಗಿದೆ. ತನ್ನ ಆಕ್ರಮಣಕಾರಿ ಕ್ರಮಗಳಿಂದ ಚೀನಾ ಗಡಿ ವಾಸ್ತವ ರೇಖೆಯಲ್ಲಿ ಒಪ್ಪಂದವನ್ನು ಮುರಿಯಲು ಪ್ರಯತ್ನಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
