ಬಹುಮತ ಸಾಭೀತು : ಸದ್ಯಕ್ಕೆ ಸೇಫಾದ ಕಮಲ್ ನಾಥ್ ಸರ್ಕಾರ

ಭೋಪಾಲ್:

       ಸದ್ಯದ ಮಟ್ಟಿಗೆ ಬಿಜೆಪಿಗೆ ಹಿನ್ನಡೆಯಾಗುವ ರೀತಿಯಲ್ಲಿ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿ ಸೋಮವಾರ ಕಮಲ್ ನಾಥ್ ಸರ್ಕಾರದ ಸದನ ಪರೀಕ್ಷೆ ನಡೆಸದೆ ಕಲಾಪವನ್ನು ಮಾರ್ಚ್ 26ಕ್ಕೆ ಮುಂದೂಡಿದರು.

       ಇಂದು ಕಲಾಪ ಆರಂಭಕ್ಕೆ ಮುನ್ನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಗವರ್ನರ್ ಲಾಲ್ಜಿ ಟಂಡನ್, ಸದನದ ಪ್ರತಿಯೊಬ್ಬ ಸದಸ್ಯರೂ ಕಾನೂನನ್ನು ಪಾಲಿಸಿ ಗೌರವವನ್ನು ಕಾಪಾಡಬೇಕು ಎಂದರು. ಸದನದ ಹೊರಗೆ ಅವರನ್ನು ಮುಖ್ಯಮಂತ್ರಿ ಕಮಲ್ ನಾಥ್ ಬರಮಾಡಿಕೊಂಡರು. ರಾಜ್ಯಪಾಲರ ಭಾಷಣವಾದ ಬಳಿಕ ಬಿಜೆಪಿ ಸದಸ್ಯರು ಬಹುಮತ ಸಾಬೀತಿಗೆ ಒತ್ತಾಯಿಸಿದರು.  ಈ ಹಂತದಲ್ಲಿ ತೀವ್ರ ಗದ್ದಲ, ಕೋಲಾಹಲ ನಡೆಯಿತು.

      ಇಂದು ಬೆಳಗ್ಗೆ ಸದನ ಕಲಾಪದಲ್ಲಿ ಸಿಎಂ ಕಮಲ್ ನಾಥ್, ಬಿಜೆಪಿ ಉಪಾಧ್ಯಕ್ಷ ಶಿವರಾಜ್ ಸಿಂಗ್ ಚೌಹಾಣ್, ವಿರೋಧ ಪಕ್ಷ ನಾಯಕ ಗೋಪಾಲ್ ಭಾರ್ಗವ ಮತ್ತು ಇತರರು ಹಾಜರಿದ್ದರು.ಬಿಜೆಪಿ ಸದಸ್ಯರು ಬಹುಮತ ಪರೀಕ್ಷೆಗೆ ಒತ್ತಾಯಿಸುತ್ತಿರುವಾಗ ಕಾಂಗ್ರೆಸ್ ನಾಯಕರು ತಮ್ಮ ಎಲ್ಲಾ ಶಾಸಕರು ಸದನದಲ್ಲಿ ಹಾಜರಿರಬೇಕೆಂದು ಪಟ್ಟುಹಿಡಿದರು.

      ರಾಜ್ಯ ಸರ್ಕಾರ ಬಹುಮತ ಸಾಬೀತು ಪಡಿಸುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರು ಇಲ್ಲದಿರುವುದರಿಂದ ಸರ್ಕಾರ ಬೀಳುವುದನ್ನು ತಡೆಯಲು ಸಾಧ್ಯವಿಲ್ಲ. ನೈತಿಕವಾಗಿ ಈ ಸರ್ಕಾರಕ್ಕೆ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಸಿಎಂ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

        ಈ ಸಂದರ್ಭದಲ್ಲಿ ಸಚಿವ ಪಿ ಸಿ ಶರ್ಮ, ಸ್ಪೀಕರ್ ನಿರ್ಧಾರದಂತೆ ನಾವು ನಡೆದುಕೊಳ್ಳುತ್ತೇವೆ, ಪಕ್ಷ ಬಹುಮತ ಸಾಬೀತು ಪರೀಕ್ಷೆಗೆ ಹೆದರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಸ್ಪೀಕರ್ ಮಧ್ಯೆ ಪ್ರವೇಶಿಸಿ ಮಾರ್ಚ್ 26ಕ್ಕೆ ಕಲಾಪವನ್ನು ಮುಂದೂಡಿದರು. ಇದಕ್ಕೂ ಮುನ್ನ ಕಳೆದ ರಾತ್ರಿ ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಭೇಟಿ ಮಾಡಿದ್ದ ಕಮಲ್ ನಾಥ್, ಸದನದಲ್ಲಿ ಪರಿಸ್ಥಿತಿ ಅನುಕೂಲಕರವಲ್ಲದಿರುವುದರಿಂದ ಬಹುಮತ ಸಾಬೀತು ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿದ್ದರು. ಕಾಂಗ್ರೆಸ್ ನ ಅನೇಕ ಶಾಸಕರನ್ನು ಬಿಜೆಪಿ ಒತ್ತೆಯಾಳಾಗಿರಿಸಿದ್ದು ಒತ್ತಾಯಪೂರ್ವಕವಾಗಿ ಹೇಳಿಕೆಗಳನ್ನು ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದರು.

      ಮಾರ್ಚ್ 14ರಂದು ನಿಮ್ಮನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ನಮ್ಮ ಕೆಲವು ಶಾಸಕರನ್ನು ಬಿಜೆಪಿ ಬೆಂಗಳೂರಿನಲ್ಲಿ ಕರ್ನಾಟಕ ಪೊಲೀಸರ ಮೇಲ್ವಿಚಾರಣೆಯಲ್ಲಿ ಒತ್ತೆಯಾಳಾಗಿರಿಸಿದೆ ಎಂದು ಹೇಳಿದ್ದೆ. ಅವರಲ್ಲಿ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವಂತೆ ಒತ್ತಡ ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯೊಳಗೆ ಸದನ ಪರೀಕ್ಷೆ ಮಾಡುವುದು ಅಸಂವಿಧಾನಿಕ ಎಂದು ನಿನ್ನೆ ಸಿಎಂ ಕಮಲ್ ನಾಥ್ ಹೇಳಿದ್ದಾರೆ.

        ಬಹುಮತ ಪರೀಕ್ಷೆ ಮುಂದೂಡುವಂತೆ ಹೇಳಿದ್ದ ಅವರು, ಸದ್ಯ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಎಲ್ಲಾ ಶಾಸಕರನ್ನು ಯಾವುದೇ ಒತ್ತಡವಿಲ್ಲದೆ ಬಿಡುಗಡೆ ಮಾಡಿದ ಮೇಲೆ ಸದನದಲ್ಲಿ ಮತ ಹಾಕುವ ಪ್ರಕ್ರಿಯೆ ನಡೆಸಬಹುದು ಎಂದು ವಿವರಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap