ಡಾ ಕೆ. ಕಸ್ತೂರಿರಂಗನ್ ವಿವಾದಾತೀತರು : ಪ್ರಧಾನಿ

ನವದೆಹಲಿ

      ಆಧುನಿಕ ಶಿಕ್ಷಣಕ್ಕೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಇಂತಹ ಅತ್ಯುತ್ತಮ ನೀತಿ ರೂಪಿಸಿದ ಬಾಹ್ಯಾಕಾಶ ವಿಜ್ಞಾನಿ, ಶಿಕ್ಷಣ ತಜ್ಞ ಡಾ. ಕೆ.ಕಸ್ತೂರಿ ರಂಗನ್ ಅವರ ಶ್ರಮ ಶ್ಲಾಘನೀಯ ಎಂದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ‘ ಉನ್ನತ ಶಿಕ್ಷಣದಲ್ಲಿ ಪರಿವರ್ತನಾ ಸುಧಾರಣೆಗಳು ‘ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ಡಾ. ಕೆ. ಕಸ್ತೂರಿರಂಗನ್ ಅವರನ್ನು ಹಾಡಿ ಹೊಗಳಿದರು.

      ಕಳೆದ ಹಲವು ಕಾಲದಿಂದ ತಪಸ್ಸಿನ ರೀತಿಯಲ್ಲಿ ಅಧ್ಯಯನ ನಡೆಸಿ ಶಿಕ್ಷಣ ನೀತಿಯನ್ನು ಡಾ.ಕಸ್ತೂರಿ ರಂಗನ್ ರೂಪಿಸಿದ್ದಾರೆ. ಅವರ ತಂಡ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಮೂಲತಃ ಕಸ್ತೂರಿ ರಂಗನ್ ವಿವಾದಾತೀತ ವ್ಯಕ್ತಿ. ವಿಜ್ಞಾನಿಯಾಗಿ, ಶಿಕ್ಷಣ ತಜ್ಞರಾಗಿ ಅವರ ಸೇವೆ ಅನನ್ಯ ಎಂದರು.

     ಆಧುನಿಕ ಭಾರತ ನಿರ್ಮಾಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಪಾಯವಾಗಲಿದೆ. ಪ್ರತಿ ದೇಶವೂ ತನ್ನದೇ ಆದ ಶಿಕ್ಷಣ ನೀತಿಯೊಂದಿಗೆ ಬೆಳೆಯುತ್ತಿದ್ದು, ನಮ್ಮ ದೇಶಕ್ಕೊಂದು ಸಮಗ್ರವಾದ ಶಿಕ್ಷಣ ನೀತಿಯ ಅಗತ್ಯವಿತ್ತು. ಅದಕ್ಕೆ ಈಗ ಮೂರ್ತರೂಪ ನೀಡಲಾಗಿದೆ. ಇನ್ನೇನಿದ್ದರೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಸದೃಢ ದೇಶ ನಿರ್ಮಾಣದತ್ತ ಗಮನಹರಿಸಲಾಗುವುದು ಎಂದು ಮೋದಿ ಹೇಳಿದರು.

    ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ವಿಚಾರಶೀಲತೆಯ ಉತ್ತೇಜನಕ್ಕೆ ಪೂರಕ ಅಂಶಗಳನ್ನು ಹೊಂದಿದೆ. ಈ ಹಿಂದಿನ ನೀತಿಯಲ್ಲಿ ದಶಕಗಳ ಕಾಲ ಏನು ಚಿಂತಿಸಬೇಕು ಎನ್ನುವ ಬಗ್ಗೆ ಒತ್ತು ನೀಡಲಾಗಿತ್ತೇ ಹೊರತು, ಹೇಗೆ ಚಿಂತಿಸಬೇಕು ಎನ್ನುವುದನ್ನು ಕಲಿಸುವತ್ತ ಗಮನಹರಿಸಿರಲಿಲ್ಲ ಎಂದರು.

    ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕೊರತೆ ಇಲ್ಲ. ವಿದ್ಯಾರ್ಥಿ ಮತ್ತು ಯುವ ಸಮುದಾಯದಲ್ಲಿ ವಿಮರ್ಶಾತ್ಮಕ ಮತ್ತು ಅನ್ವೇಷಣಾತ್ಮಕ ಸಾಮರ್ಥ್ಯ ಬೆಳೆಸುವತ್ತ ಗಮನಹರಿಸುವ ಅಗತ್ಯವಿದೆ. ಎಲ್ಲಿಯವರೆಗೆ ಶಿಕ್ಷಣ ವ್ಯವಸ್ಥೆ ಕಲಿಕೆಯನ್ನು ಉತ್ಸಾಹದಾಯಕವಾಗಿರಿಸುವುದಿಲ್ಲವೋ ಅಲ್ಲಿಯ ತನಕ ಶಿಕ್ಷಣ ವ್ಯವಸ್ಥೆ ಪರಿಪೂರ್ಣ ಎನಿಸಲಾರದು ಎಂದು ಪ್ರತಿಪಾದಿಸಿದರು.

     ಈ ನಿಟ್ಟಿನಲ್ಲಿ ಸಾರ್ವಜನಿಕರು, ಪೆÇೀಷಕರು, ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಶಿಕ್ಷಣ ಕ್ಷೇತ್ರದ ಪರಿಣತರು ಅವಿರತ ಶ್ರಮ ವಹಿಸಬೇಕು. ಶಿಕ್ಷಣ ಎಂಬುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಈ ನೀತಿ ಪೂರಕವಾಗಿದೆ ಎಂದರು.

    ಶಿಕ್ಷಣ ವ್ಯವಸ್ಥೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕಿದ್ದು, ನಮ್ಮ ವಿದ್ಯಾರ್ಥಿಗಳಿಗೆ ಜಾಗತಿಕ ಮನ್ನಣೆ ದೊರೆಯಬೆಕು. ಈ ದಿಸೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಅಗತ್ಯವಿತ್ತು. ಅದರಂತೆ ಸಮಗ್ರ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಇದರಲ್ಲಿ ಯಾವುದೇ ಭೇದ ಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.

     ಪ್ರತಿಭೆ, ತಂತ್ರಜ್ಞಾನ, ವಿಚಾರಣೆ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಸಬಲೀಕರಣಕ್ಕೂ ಆದ್ಯತೆ ನೀಡಲಾಗುತ್ತಿದ್ದು, ಬಹು ಹಂತಗಳಲ್ಲಿ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಮತ್ತು ನಿರ್ಗಮಿಸುವ ಅವಕಾಶವನ್ನು ಇದು ಒಳಗೊಂಡಿದೆ. ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವೇಳೆಯಲ್ಲಿಯೇ ಕೋರ್ಸ್‍ಗಳನ್ನು ಬದಲಿಸಿಕೊಳ್ಳಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

     ಪ್ರತಿಭೆ, ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಭಾರತದ ಪ್ರತಿಭೆಗಳು ಭಾರತದಲ್ಲಿಯೇ ಕಲಿತು, ತಮ್ಮ ದೇಶವನ್ನು ಕಟ್ಟುವ ಕಾಯಕದಲ್ಲಿ ತೊಡಗುವಂತೆ ಮಾಡಲು ಈ ನೀತಿ ಸಹಕಾರಿಯಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟರು.ಸಮಾವೇಶದಲ್ಲಿ ಶಿಕ್ಷಣ ನೀತಿ ಪರಿಣಿತ ತಂಡದ ಮುಖ್ಯಸ್ಥ ಡಾ.ಕೆ.ಕಸ್ತೂರಿರಂಗನ್, ಸದಸ್ಯ .ಎಂ.ಕೆ.ಶ್ರೀಧರ್, ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ , ತಜ್ಞರು, ವಿಜ್ಞಾನಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link