ಕೋಲ್ಕತ್ತಾ
ಸ್ಟಾರ್ ಆಟಗಾರ ಆ್ಯಯಂಡ್ರಿ ರಸೆಲ್ (32ಕ್ಕೆ 49 ರನ್) ಅವರ ಆಲ್ ರೌಂಡರ್ ಆಟದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 12ನೇ ಆವೃತ್ತಿಯಲ್ಲಿ ಮಣಿಸಿ ಶುಭಾರಂಭ ಮಾಡಿದೆ.
ಇಲ್ಲಿನ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ, ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 181 ರನ್ಗಳನ್ನು ದಾಖಲಿಸಿ, ನೈಟ್ ರೈಡರ್ಸ್ಗೆ 182 ರನ್ ಗುರಿ ನೀಡಿತು. 182 ಗುರಿಯನ್ನು ಬೆನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ 19.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಕಲೆ ಹಾಕಿ ಮೊದಲ ಗೆಲುವಿನ ನಗೆ ಬೀರಿತು.
ಸವಾಲಿನ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ತಂಡದ ಆರಂಭ ಕಳಪೆಯಾಗಿತ್ತು.
ಖ್ಯಾತ ಬ್ಯಾಟ್ಸ್ ಮನ್ ಕ್ರಿಸ್ ಲೈನ್ (7) ಬೇಗ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್ ಗೆ ನಿತಿಶ್ ರಾಣಾ ಹಾಗೂ ರಾಬಿನ್ ಉತ್ತಪ್ಪ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದ್ದು, ಈ ಜೋಡಿ ತಂಡವು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಜೋಡಿ ಎರಡನೇ ವಿಕೆಟ್ ಗೆ 80 ರನ್ ಜೋಡಿಸಿದರು.
ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ 27 ಎಸೆತಗಳಲ್ಲಿ 35 ರನ್ ಬಾರಿಸಿ ಸಿದ್ಧಾರ್ಥ್ ಕೌಲ್ ಎಸೆತದಲ್ಲಿ ಔಟ್ ಆದರು. ನಾಯಕ ದಿನೇಶ್ ಕಾರ್ತಿಕ್ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು.
ನಂತರ ಬಂದ ಆಲ್ ರೌಂಡರ್ ಆಟಗಾರ ಆ್ಯಯಂಡ್ರಿ ರಸೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 19 ಎಸೆತಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 4 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 49 ರನ್ ಬಾರಿಸಿದರು. ಇನ್ನು ಯುವ ಆಟಗಾರ ಶುಭ್ ಮನ್ ಗಿಲ್ 18 ರನ್ ಬಾರಿಸಿ ತಂಡದ ಜಯದಲ್ಲಿ ಮಿಂಚಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡದ ಆರಂಭ ಭರ್ಜರಿಯಾಗಿತ್ತು. ತಂಡದ ಆರಂಭಿಕರು ತಂಡಕ್ಕೆ ಶತಕದ ಕಾಣಿಕೆ ನೀಡಿದರು. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದು ಭಾನುವಾರ ಅಂಗಳಕ್ಕೆ ಇಳಿದ ಡೇವಿಡ್ ವಾರ್ನರ್ ನಿರೀಕ್ಷೆಯಂತೆ ಅದ್ಭುತ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾದರು.
ಎದುರಿಸಿದ ಕೇವಲ 53 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಯೊಂದಿಗೆ ಒಟ್ಟು 85 ರನ್ ಸಿಡಿಸಿ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದರು. ಮತ್ತೊಂದು ತುದಿಯಲ್ಲಿ ವಾರ್ನರ್ಗೆ ಸಾಥ್ ನೀಡುತ್ತಿದ್ದ ಜಾನಿ ಬೈರ್ ಸ್ಟೋ 35 ಎಸೆತಗಳಲ್ಲಿ 39 ರನ್ ಗಳಿಸಿದರು. ವಿಶ್ವಕಪ್ ಭಾರತ ತಂಡದ ರೇಸ್ನಲ್ಲಿರುವ ವಿಜಯ್ ಶಂಕರ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 24 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿಯೊಂದಿಗೆ 40 ರನ್ ಸಿಡಿಸಿ ಹೈದರಾಬಾದ್ ತಂಡದ ಮೊತ್ತ 180ರ ಗಡಿ ದಾಟಿಸಲು ನೆರವಾದರು. ಆ್ಯಯಂಡ್ರೋ ರಸೆಲ್ ಮೂರು ಓವರ್ಗಳಲ್ಲಿ 32 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್:
ಸನ್ ರೈಸರ್ಸ್ ಹೈದರಾಬಾದ್ 181/3 (20)
ಡೇವಿಡ್ ವಾರ್ನರ್ 85
ಜಾನಿ ಬೇರ್ ಸ್ಟೋ 39
ವಿಜಯ್ ಶಂಕರ್ 40
ಕೋಲ್ಕತ್ತಾ ನೈಟ್ ರೈಡರ್ಸ್ 183/4 (19.4)
ನಿತೀಶ್ ರಾಣಾ 68
ರಾಬಿನ್ ಉತ್ತಪ್ಪ 35
ಆ್ಯಯಂಡ್ರಿ ರಸೆಲ್ ಅಜೇಯ 49)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
