ಕೋಲ್ಕತ್ತಾ:
ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಇಂದು ಆಯೋಜಿಸಿರುವ ಬೃಹತ್ ಸಮಾವೇಶ ಮತ್ತು ಮಹಾಘಟಬಂಧನ್ ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಇದರಲ್ಲಿ ಬಿಜೆಪಿ ವಿರೋಧಿ ಮತ್ತು ಯುಪಿಎ ಬೆಂಬಲಿತ ಪಕ್ಷಗಳ ನಾಯಕರು ತಮ್ಮ ಒಗ್ಗಟ್ಟನ್ನು ದೇಶದ ಜನತೆ ಹಾಗು ಬಿಜೆಪಿಗೆ ತೋರಿಸಲು ಇದು ವೇದಿಕೆಯಾಗಲಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಮಧ್ಯಾಹ್ನ ಸುಮಾರು 12 ಗಂಟೆಗೆ ಬ್ರಿಗೇಡ್ ಪೆರೇಡ್ ಗ್ರೌಂಡ್ಸ್ ನಲ್ಲಿ ಈ ಶಕ್ತಿ ಪ್ರದರ್ಶನವಾಗಲಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಉಳಿದ ರಾಜಕೀಯ ಪಕ್ಷಗಳೆಲ್ಲಾ ಒಗ್ಗಟ್ಟಿನ ಪ್ರದರ್ಶನ ಮಾಡುವ ಮಹಾ ಸಮಾವೇಶ ಇದಾಗಲಿದೆ.
ಲೋಕಸಭಾ ಚುನಾವಣೆಗೆ ಮೋದಿ ವಿರುದ್ಧ ತಮ್ಮ ಒಗ್ಗಟ್ಟು ತೋರಿಸಲು ಹಲವು ರಾಜಕೀಯ ಘಟಾನುಘಟಿಗಳು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.ಬಿಜೆಪಿಯೇತರ ಸಂಯುಕ್ತ ರಂಗ ನಿರ್ಮಾಣಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘನೀಯ ಎಂದು ರಾಹುಲ್ ಗಾಂಧಿ ಈಗಾಗಲೇ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ನಾಶ ಮಾಡಲು ಹೊರಟಿರುವ ನಮ್ಮ ದೇಶಕ್ಕೆ ಆಧಾರ ಸ್ತಂಭವಾಗಿರುವ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಜಾತ್ಯಾತೀತತೆಯನ್ನು ರಕ್ಷಿಸಲು ನಿಜವಾದ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯನ್ನು ಕಾಣಲು ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟಾಗುವ ಅಗತ್ಯ ಖಂಡಿತಾ ಇದೆ, ಅದಕ್ಕೆ ಮೊದಲ ಹೆಜ್ಜೆಯಾಗಿ ಇಂದು ನೀವು ನಡೆಸುತ್ತಿರುವ ಸಭೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ