ಜೂ.25 ರಂದು ಭಾರತಕ್ಕೆ ಭೇಟಿ ನೀಡಲಿರುವ ಮೈಕ್ ಪಾಪಿಯೋ..!!

ನವದೆಹಲಿ

      ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಇದೇ ತಿಂಗಳ 25 ರಿಂದ ಭಾರತಕ್ಕೆ ಭೇಟಿ ನೀಡಲಿದ್ದಾರೆ.ಎನ್ ಡಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದನಂತರ ಅಮೆರಿಕಾ ಹಾಗೂ ಭಾರತ ನಡುವಣ ಉನ್ನತ ಮಟ್ಟದಲ್ಲಿ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಲಿದೆ.

       ತಮ್ಮ ಭಾರತ ಭೇಟಿಯ ವೇಳೆ ಮೈಕ್ ಪಾಂಪಿಯೋ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಸರ್ಕಾರದ ಗಣ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

        ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಭೇಟಿಯಿಂದ ಭಾರತ – ಅಮೆರಿಕಾ ಕಾರ್ಯತಂತ್ರ ಸಹಭಾಗಿತ್ವ ಬಲಪಡಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಲು ಉಭಯ ದೇಶಗಳಿಗೆ ಉತ್ತಮ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.

   ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ಸೇರಿದಂತೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಉನ್ನತ ಮಟ್ಟದಲ್ಲಿ ಸಮಾಲೋಚನೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದರು.

      ಈ ತಿಂಗಳ ಅಂತ್ಯದಲ್ಲಿ ಜಪಾನ್ ನ ಒಸಾಕಾದಲ್ಲಿ ನಡೆಯಲಿರುವ ಜಿ.20 ದೇಶಗಳ ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರಮೋದಿ ನಡುವೆ ನಡೆಯಲಿರುವ ಸಭೆಯ ಮಾತುಕತೆಗೆ ವೇದಿಕೆ ಸಿದ್ಧ ಪಡಿಸಲು ಪಾಂಪಿಯೋ ಅವರ ಭೇಟಿ ನೆರವಾಗಲಿದೆ ಎಂದು ವಿವರಿಸಿದರು.

    ವ್ಯಾಪಾರ ನಿರ್ಬಂಧ ಸಂಬಂಧ ಭಾರತಕ್ಕೆ ಕಲ್ಪಿಸಿದ್ದ ವಿಶೇಷ ಸವಲತ್ತನ್ನು ಅಮೆರಿಕಾ ಅಂತ್ಯಗೊಳಿಸಿದ ಎರಡು ವಾರಗಳ ನಂತರ ಕಳೆದ ಜೂನ್ 15 ರಂದು ಭಾರತ, ಅಮೆರಿಕಾದಿಂದ ಆಮದಾಗುವ ಸರಕುಗಳ ಮೇಲೆ ಪ್ರತಿಕಾರ ಸುಂಕಗಳನ್ನು ಹೇರಿದೆ.

      ಅಮೆರಿಕಾ ಹಾಗೂ ಭಾರತ ನಡುವಣ ದ್ವಿಪಕ್ಷೀಯ ವ್ಯಾಪಾರ 150 ಬಿಲಿಯನ್ ತಲುಪಿದ್ದು ಭಾರತ ಕ್ಕೆ ಪ್ರಮುಖ ಸೇನಾ ಸಹಭಾಗಿತ್ವ ಸ್ಥಾನಮಾನ ಕಲ್ಪಿಸಿರುವ ಅಮೆರಿಕಾ, ಭಾರತವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಬೆಂಬಲಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link