ನವದೆಹಲಿ
ತಮ್ಮ ನೇತೃತ್ವದ ಸಂಪುಟ ರಚನೆಗೆ ದೆಹಲಿಯಲ್ಲಿ ಕಸರತ್ತು ಆರಂಭವಾಗಿದ್ದು, ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಲಿರುವ ಶಾಸಕರ ಪಟ್ಟಿ ಹಿಡಿದು ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ ಎಸ್‍ಎಸ್ ವರಿಷ್ಠ ನಾಯಕ ಬಿ ಎಲ್ ಸಂತೋಷ್ ಭೇಟಿ ಮಾಡಿ ಚರ್ಚಿಸಿದರು.
ದೆಹಲಿಯ ಕರ್ನಾಟಕ ಭವನಕ್ಕೆ ಆಗಮಿಸಿದ ಬಿ ಎಲ್ ಸಂತೋಷ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಂಪುಟಕ್ಕೆ ಸೇರುವವರ ಪಟ್ಟಿ ಬಗ್ಗೆ ಚರ್ಚೆ ನಡೆಸಿದರು. ಈ ಇಬ್ಬರು ನಾಯಕರು ಸೇರಿ ಸಂಭಾವ್ಯ ಸಚಿವರ ಪಟ್ಟಿ ತಯಾರಿಸಿ ನಾಳೆ ಅಮಿತ್ ಶಾ ಅವರ ಮುಂದಿಡಲಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಬಿಎಲ್ ಸಂತೋಷ್ ಈಗಾಗಲೇ ಪಕ್ಷಾಧ್ಯಕ್ಷರಿಗೆ ಶಾಸಕರ ಪಟ್ಟಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಪ್ರಮುಖವಾಗಿ ಜಾತಿಗಿಂತ ವ್ಯಕ್ತಿ ಹಾಗೂ ಪಕ್ಷ ಸಂಘಟನೆ, ಆರ್ ಎಸ್‍ಎಸ್ ಜೊತೆಗಿನ ನಂಟು, ವೈಯಕ್ತಿಕ ವರ್ಚಸ್ಸು, ಪಕ್ಷ ಹಾಗೂ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಆಶಯ ಅಮಿತ್ ಶಾ ಅವರದು ಎನ್ನಲಾಗಿದೆ.
ಹೀಗಾಗಿ ಯಡಿಯೂರಪ್ಪ ಹಾಗೂ ಬಿಎಲ್ ಸಂತೋಷ್ ಸಿದ್ದಪಡಿಸುವ ಪಟ್ಟಿಯನ್ನು ಅಮಿತ್ ಷಾ ಮುಂದಿಟ್ಟು ನಾಳೆಯೇ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಅಂತೆಯೇ ಸಚಿವರಿಗೆ ನೀಡಲಾಗುವ ಖಾತೆಗಳನ್ನು ಹೈಕಮಾಂಡ್ ಮಟ್ಟದಲ್ಲಿಯೇ ಹಂಚಿಕೆ ಪ್ರಕ್ರಿಯೆಯೂ ಸಹ ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಎರಡು ಹಂತದಲ್ಲಿ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದ್ದು, ಪೂರ್ಣ ಪ್ರಮಾಣದ ಮಂತ್ರಿಮಂಡಲ ಉಪ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬರಲಿದೆ. ಮೊದಲ ಹಂತದಲ್ಲಿ 12 ರಿಂದ 15 ಸದಸ್ಯರುಳ್ಳ ಸಂಪುಟ ರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಒಂದು ವೇಳೆ ಜಾತಿವಾರು, ಕ್ಷೇತ್ರವಾರು ಶಾಸಕರನ್ನು ಆಯ್ಕೆ ಮಾಡಿದರೆ 2008ರಲ್ಲಿ ಆದ ರೀತಿ ಸರ್ಕಾರದ ಹಿತ ರಕ್ಷಣೆಗಿಂತ ಅಪಾಯಕಾರಿ ಎಂದು ಅರಿತಿರುವ ವರಿಷ್ಠರು ಅಳೆದು ತೂಗಿ, ಈ ಭಾರಿ ಸಚಿವ ಸಂಪುಟ ರಚಿಸಲು ತೀರ್ಮಾನಿಸಿದ್ದಾರೆ. ನಾಳೆ ಅಮಿತ್ ಷಾ ಭೇಟಿ ವೇಳೆ ಮುಖ್ಯಮಂತ್ರಿ ನೀಡುವ ಪಟ್ಟಿಯಲ್ಲಿರುವ ಶಾಸಕರ ಪೂರ್ವಾಪರ, ಪಕ್ಷ ಹಾಗೂ ಸಂಘಟನೆಗೆ ನೀಡಿರುವ ಕೊಡುಗೆ, ವೈಯಕ್ತಿಕ ಮಾಹಿತಿಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ವರಿಷ್ಠರ ಮುಂದೆ ಯಡಿಯೂರಪ್ಪ ಮಂಡಿಸಬೇಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆ ಎಂಬುದು ಗಜ ಪ್ರಸವದಂತಾಗಿದ್ದು,ನಾಳೆ ಸಂಪುಟ ರಚನೆಗೆ ಅನುಮೋದನೆ ದೊರಕುವ ಸಾಧ್ಯತೆ ಬಹುತೇಕ ನಿಶ್ಚಿತ ಎನ್ನಲಾಗಿದೆ.
ಯಡಿಯೂರಪ್ಪ ಅವರ ಸಂಪುಟ ಸೇರುವ ಸಂಭಾವ್ಯರ ಪಟ್ಟಿ :
1) ಎಸ್.ಎ.ರಾಮದಾಸ್ – ಬ್ರಾಹ್ಮಣ, ಮೈಸೂರು, 2) ಆರ್. ಅಶೋಕ್ – ಒಕ್ಕಲಿಗ, ಬೆಂಗಳೂರು, 3) ಡಾ. ಅಶ್ವತ್ಥ ನಾರಾಯಣ – ಒಕ್ಕಲಿಗ, ಬೆಂಗಳೂರು ,4) ಅಪ್ಪಚ್ಚು ರಂಜನ್- ಕೊಡವ , ಮಡಿಕೇರಿ,5) ಕೆ.ಎಸ್.ಈಶ್ವರಪ್ಪ- ಕುರುಬ, ಶಿವಮೊಗ್ಗ,6) ಕೋಟಾ ಶ್ರೀನಿವಾಸ್ ಪೂಜಾರಿ – ಬಿಲ್ಲವ, ಉಡುಪಿ,7) ಮಾಡಾಳ್ ವಿರೂಪಾಕ್ಷಪ್ಪ- ಲಿಂಗಾಯತ, ದಾವಣಗೆರೆ ,8) ಜಗದೀಶ್ ಶೆಟ್ಟರ್ – ಲಿಂಗಾಯತ, ಹುಬ್ಬಳ್ಳಿ,9) ಕುಮಾರ್ ಬಂಗಾರಪ್ಪ – ಈಡಿಗ ,ಶಿವಮೊಗ್ಗ,10) ಜೆ.ಸಿ.ಮಾಧುಸ್ವಾಮಿ -ಲಿಂಗಾಯತ, ತುಮಕೂರು11) ಪ್ರೀತಂ ಗೌಡ – ಒಕ್ಕಲಿಗ, ಹಾಸನ, 12) ಅಭಯ್ ಪಾಟೀಲ್ – ಬೆಳಗಾವಿ,13) ಹಾಲಾಡಿ ಶ್ರೀನಿವಾಸ ಶೆಟ್ಟಿ – ಹಾಲಾಡಿ,ಉಡುಪಿ 14) ಅಂಗಾರ -ಸುಳ್ಯ ,ದಕ್ಷಿಣ ಕನ್ನಡ,15) ರಾಜೀವ್ – ಕುಡುಚಿ , ಬೆಳಗಾವಿ,16) ಸಿ.ಪಿ.ಯೋಗೀಶ್ವರ್ – ಒಕ್ಕಲಿಗ,ರಾಮನಗರ,17) ಗೋವಿಂದ ಕಾರಜೋಳ -ದಲಿತ , ಬಿಜಾಪುರ
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ