ಅಮೆರಿಕಾದ ‘ಒಬಾಮಾ ಕೇರ್’ ರೀತಿಯಲ್ಲಿ ಭಾರತದಲ್ಲಿ ‘ಮೋದಿಕೇರ್’.! : ಏನಿದು..?

ಬೆಂಗಳೂರು: 

      ಅಮೆರಿಕದ ಒಬಾಮಾ ಕೇರ್ ರೀತಿಯಲ್ಲಿ ಮೋದಿಕೇರ್ ಎಂದೇ ಪ್ರಸಿದ್ಧಿಯಾಗಿರುವ ಆಯುಷ್ಮಾನ್ ಭಾರತ್ ಯೋಜನೆಗೆ(ಎಬಿ–ಎನ್‌ಎಚ್‌ಪಿಎಂ) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಸೆ. 23) ಜಾರ್ಖಂಡ್‌ನಲ್ಲಿ ಚಾಲನೆ ನೀಡಲಿದ್ದಾರೆ. 

      ಆದರೆ, ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಇದೇ ಸೆ.25ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಎಂದು ನೀತಿ ಆಯೋಗದ ಸದಸ್ಯ ಹಾಗೂ ಈ ಯೋಜನೆಯ ಪ್ರಮುಖ ವಿನ್ಯಾಸಕಾರ ವಿ.ಕೆ.ಪಾಲ್‌ ತಿಳಿಸಿದ್ದಾರೆ. 

  ಆಯುಷ್ಮಾನ್ ಭಾರತ್ ಯೋಜನೆ..?

      ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ (ಎಬಿ-ಎನ್ ಎಚ್‌ಪಿಎಂ) ಸುಮಾರು 10 ಕೋಟಿ ಕುಟುಂಬಗಳ 50 ಕೋಟಿ ಜನರನ್ನು ಒಳಗೊಳ್ಳುವ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ. ಈ ಯೋಜನೆಯಡಿ ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷ ರು. ವರೆಗೆ ಆಸ್ಪತ್ರೆ ಖರ್ಚು ಭರಿಸಲಾಗುತ್ತದೆ.

      ಮೊದಲ ಹಂತದಲ್ಲಿ ಛತ್ತೀಸ್‌ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿಯಾಗಲಿದೆ. ಈ ಆರೋಗ್ಯ ಯೋಜನೆಯಲ್ಲಿ ಮೊದಲಿಗೆ ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗುತ್ತದೆ. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧರಿತ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.

      ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಹಾಲಿ ಜಾರಿಯಲ್ಲಿರುವ ಕೇಂದ್ರದ ಪ್ರಾಯೋಜಿತ ಯೋಜನೆಗಳಾದ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಆರ್‌ಎಸ್‌ಬಿವೈ) ಮತ್ತು ಹಿರಿಯ ನಾಗರಿಕರ ಆರೋಗ್ಯ ರಕ್ಷಣಾ ಯೋಜನೆ (ಎಸ್‌ಸಿಎಚ್‌ಐಎಸ್)ಗಳು ಸೇರ್ಪಡೆಯಾಗಲಿವೆ.

ಆಧಾರ್‌ ಕಡ್ಡಾಯವಲ್ಲ:

ಆಯುಷ್ಮಾನ್ ಭಾರತ ಯೋಜನೆಗೆ ಆಧಾರ್ ನೋಂದಣಿ ಕಡ್ಡಾಯ ಅಲ್ಲ. ಪಡಿತರ ಚೀಟಿ, ಮತದಾರರ ಚೀಟಿ ಯಾವುದಿದ್ದರೂ ಸಾಕು. ಫಲಾನುಭವಿಗಳು ಆಸ್ಪತ್ರೆಗೆ ಹೋಗಲು ಪ್ರಯಾಣ ಭತ್ಯೆಯೂ ಸಿಗಲಿದೆ. ಒಮ್ಮೆ ನೋಂದಾಯಿಸಿದರೆ ಒಂದು ವರ್ಷದವರೆಗೆ ಸೌಲಭ್ಯವಿರುತ್ತದೆ.

ಈ ಯೋಜನೆಯಿಂದ ದೇಶಕ್ಕಾಗುವ ಉಪಯೋಗವೇನು..?

      ಭಾರತದ ಪಬ್ಲಿಕ್ ಹೆಲ್ತ್ ಫೌಂಡೇಶನ್ ಕೈಗೊಂಡ ಅಧ್ಯಯನದ ಪ್ರಕಾರ, ದೇಶದ ಜನರು ಆರೋಗ್ಯ ರಕ್ಷಣೆಯ ಮುಕ್ಕಾಲು ಭಾಗ ಖರ್ಚನ್ನು ತಮ್ಮ ದುಡಿಮೆಯ ಉಳಿತಾಯದ ಹಣದಿಂದಲೇ ನಿರ್ವಹಿಸುತ್ತಿದ್ದಾರೆ. ಅಲ್ಲದೆ ರಾಷ್ಟ್ರೀಯ ಮಾದರಿ ಸಮೀಕ್ಷೆ ಅಂಕಿಂಶಗಳ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆಸ್ಪತ್ರೆಗಳಲ್ಲಿನ ಒಳರೋಗಿಗಳ ಚಿಕಿತ್ಸಾ ವೆಚ್ಚ ಶೇ.300 ರಷ್ಟು ಹೆಚ್ಚಾಗಿದೆ. ಶೇ.80 ಕ್ಕೂ ಅಧಿಕ ವೆಚ್ಚವನ್ನು ಉಳಿತಾಯ ಹಣದಿಂದಲೇ ಖರ್ಚು ಮಾಡಲಾಗುತ್ತಿದೆ.

      ಗ್ರಾಮೀಣ ಕುಟುಂಬಗಳು ಪ್ರಮುಖವಾಗಿ ಆಸ್ಪತ್ರೆ ವೆಚ್ಚಕ್ಕೆ ಕೌಟುಂಬಿಕ ಆದಾಯ ಮತ್ತು ಉಳಿತಾಯದಿಂದ ಶೇ.೬೮ರಷ್ಟು ಮತ್ತು ಸಾಲದಿಂದ ಶೇ.25 ರಷ್ಟು ಭರಿಸುತ್ತಿವೆ. ನಗರ ಪ್ರದೇಶಗಳ ಜನತೆ ಚಿಕಿತ್ಸಾ ವೆಚ್ಚಕ್ಕೆ ಆದಾಯ ಮತ್ತು ಉಳಿತಾಯದ ಹಣದಿಂದ ಶೇ.75 ರಷ್ಟು ಮತ್ತು ಶೇ.18 ರಷ್ಟು ಸಾಲವನ್ನು ಸಾಲ ಮಾಡಿ ಭರಿಸುತ್ತಿದ್ದಾರೆ. ಆರೋಗ್ಯ ಸಂಬಂಧಿ ಖರ್ಚು-ವೆಚ್ಚದಿಂದಾಗಿಯೇ 6 ಕೋಟಿ ಜನರು ಬಡತನ ರೇಖೆಗಿಂತಲೂ ಕೆಳಮಟ್ಟದಲ್ಲಿದ್ದಾರೆ.

     ಇಂಥ ಕುಟುಂಬಗಳ ಆರೋಗ್ಯ ರಕ್ಷಣೆಗೆ ಬೆನ್ನೆಲುಬಾಗಿ ನಿಲ್ಲುವುದೇ ಆಯುಷ್ಮಾನ್ ಯೋಜನೆಯ ಉದ್ದೇಶ. ಈ ಮೂಲಕ ಜನರು ತಮ್ಮ ಆರೋಗ್ಯಕ್ಕಾಗಿ ಉಳಿತಾಯ ಹಣದಿಂದ ಖರ್ಚು ಮಾಡುವುದನ್ನು ಈ ಯೋಜನೆಯು ತಗ್ಗಿಸಲಿದೆ. ಅಲ್ಲದೆ ಜನರು ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಪಡೆಯಲಾಗದ ಕೆಲವು ಅಗತ್ಯಗಳನ್ನು ಇದು ಪೂರೈಸಲಿದೆ. ಇದರಿಂದಾಗಿ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತದೆ,

      ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಉದ್ಯೋಗ ಸೃಷ್ಟಿಯ ಜೊತೆಗೆ ಜೀವನಮಟ್ಟವೂ ಸುಧಾರಣೆಯಾಗಲಿದೆ.

ಹಣ ನೀಡದೇ ಚಿಕಿತ್ಸೆ ಪಡೆಯಿರಿ..!?

      ಈ ಯೋಜನೆಯಡಿ ಕುಟುಂಬವೊಂದು 5 ಲಕ್ಷ ರು.ವರೆಗೂ ಆರೋಗ್ಯ ಸಂಬಂಧಿತ ಸೇವೆ, ಚಿಕಿತ್ಸೆಯನ್ನು ಎಬಿ-ಎನ್ ಎಚ್‌ಪಿಎಂ ಕಾರ್ಡ್ ಮೂಲಕ ಪಡೆಯಬಹುದು. ಒಮ್ಮೆ ನೋಂದಣಿ ಮಾಡಿಕೊಂಡರೆ ಇತರ ಆರೋಗ್ಯ ವಿಮೆಗಳಂತೆ ಒಂದು ವರ್ಷದವರೆಗೂ ಸೌಲಭ್ಯವಿರುತ್ತದೆ.    

ಯೋಜನೆಗೆ ಹಣ ನೀಡುವವರಾರು..?

      ಪ್ರೀಮಿಯಂ ಪಾವತಿಯ ವೆಚ್ಚ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ನಡುವೆ ಹಂಚಿಕೆಯಾಗಲಿದೆ. ಹಣಕಾಸು ಸಚಿವಾಲಯದ ಮಾರ್ಗಸೂಚಿ ಅನ್ವಯ ಹಂಚಿಕೆ ಪ್ರಮಾಣ ನಿಗದಿಯಾಗಲಿದೆ. ಬಹುತೇಕ ಎಲ್ಲ ರಾಜ್ಯಗಳು ಮತ್ತು ತಮ್ಮ ಶಾಸಕಾಂಗವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ 60:40 ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ವೆಚ್ಚ ಹಂಚಿಕೆಯಾಗಲಿದೆ.

      ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಾದ ಜಮ್ಮು-ಕಾಶ್ಮೀರ, ಹಿಮಾಚಲ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಅದು 90:10 ರ ಅನುಪಾತದಲ್ಲಿ ಹಂಚಿಕೆಯಾಗಲಿದೆ. ಆದರೆ ತಮ್ಮದೇ ಶಾಸಕಾಂಗವನ್ನು ಹೊಂದಿರದ ಕೇಂದ್ರಡಳಿತ ಪ್ರದೇಶಗಳಲ್ಲಿ ಶೇ.100 ರಷ್ಟು ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ಜೊತೆಗೆ ರಾಜ್ಯಸರ್ಕಾರಗಳು ತಮ್ಮ ರಾಜ್ಯದ ಆರೋಗ್ಯ ಕಾರ್ಯಕ್ರಮಗಳನ್ನು ಮುಂದುವರೆಸಲೂ ಇಲ್ಲಿ ಮುಕ್ತ ಅವಕಾಶವಿದೆ.

ದೇಶಕ್ಕೆ ಈ ಯೋಜನೆ ಏಕೆ ಮುಖ್ಯ?

      ಗ್ರಾಮೀಣ ಕುಟುಂಬಗಳು ಪ್ರಮುಖವಾಗಿ ಆಸ್ಪತ್ರೆ ವೆಚ್ಚಕ್ಕೆ ಕೌಟುಂಬಿಕ ಆದಾಯ ಮತ್ತು ಉಳಿತಾಯದಿಂದ ಶೇ.68 ರಷ್ಟು ಮತ್ತು ಸಾಲದಿಂದ ಶೇ.25 ರಷ್ಟು ಭರಿಸುತ್ತಿವೆ. ನಗರ ಪ್ರದೇಶಗಳ ಜನತೆ ಚಿಕಿತ್ಸಾ ವೆಚ್ಚಕ್ಕೆ ಆದಾಯ ಮತ್ತು ಉಳಿತಾಯದ ಹಣದಿಂದ ಶೇ.75 ರಷ್ಟು ಮತ್ತು ಶೇ.18 ರಷ್ಟು ಸಾಲವನ್ನು ಸಾಲ ಮಾಡಿ ಭರಿಸುತ್ತಿದ್ದಾರೆ.

      ಆರೋಗ್ಯ ಸಂಬಂಧಿ ಖರ್ಚು-ವೆಚ್ಚದಿಂದಾಗಿಯೇ 6 ಕೋಟಿ ಜನರು ಬಡತನ ರೇಖೆಗಿಂತಲೂ ಕೆಳಮಟ್ಟದಲ್ಲಿದ್ದಾರೆ. ಇಂಥ ಕುಟುಂಬಗಳ ಆರೋಗ್ಯ ರಕ್ಷಣೆಗೆ ಬೆನ್ನೆಲುಬಾಗಿ ನಿಲ್ಲುವುದೇ ಆಯುಷ್ಮಾನ್ ಯೋಜನೆಯ ಉದ್ದೇಶ. ಈ ಮೂಲಕ ಜನರು ತಮ್ಮ ಆರೋಗ್ಯಕ್ಕಾಗಿ ಉಳಿತಾಯ ಹಣದಿಂದ ಖರ್ಚು ಮಾಡುವುದನ್ನು ಈ ಯೋಜನೆಯು ತಗ್ಗಿಸಲಿದೆ. ಅಲ್ಲದೆ ಜನರು ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಪಡೆಯಲಾಗದ ಕೆಲವು ಅಗತ್ಯಗಳನ್ನು ಇದು ಪೂರೈಸಲಿದೆ.

      ಇದರಿಂದಾಗಿ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತದೆ, ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಉದ್ಯೋಗ ಸೃಷ್ಟಿಯ ಜೊತೆಗೆ ಜೀವನ ಮಟ್ಟವೂ ಸುಧಾರಣೆಯಾಗಲಿದೆ.

ಯಾರಿಗೆ ವಿಮೆ ಸೌಲಭ್ಯ ಸಿಗಲಿದೆ?

      ಯೋಜನೆಯ ಸೌಲಭ್ಯಕ್ಕಾಗಿ ಪಡಿತರ ಚೀಟಿ ಇದ್ದರೆ ಸಾಕು. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಇದ್ದರೂ ಸಾಕು. ಕುಟುಂಬದ ಗಾತ್ರ
ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ. ದೇಶಾದ್ಯಂತ ಸರ್ಕಾರಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಸೇವೆ ಇರಲಿದೆ.

      ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯೂ ಸಿಗುತ್ತದೆ. ರೋಗಿಗಳ ಆಹಾರ ವೆಚ್ಚವೂ ಈ ವಿಮೆಯಲ್ಲಿ ಸೇರಿದೆ. ಈ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳು ದೇಶಾದ್ಯಂತ ಏಕರೂಪವಾಗಿ ದೊರಕಲಿವೆ.

  •  ಜಾತಿ ಗಣತಿ/ ಪಡಿತರ ಚೀಟಿ ಆಧಾರದ ಮೇಲೆ ಚಿಕಿತ್ಸೆ
  • ಎಸ್‌ಸಿ/ಎಸ್‌ಟಿ, ಬುಡಕಟ್ಟು ಸಮುದಾಯದವರು 
  • ಕೂಲಿ ಕಾರ್ಮಿಕರು, ಜೀತ ವಿಮುಕ್ತರು 
  • ರದ್ದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು
  •  ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರ
  • ಟೈಲರ್, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾವಾಲಾಗಳು
  • ಎಲೆಕ್ಟ್ರೀಷಿಯನ್, ಮೆಕಾನಿಕ್, ಹೆಲ್ಪರ್‌ಗಳು
  • ಹೃದಯದ ಬೈಪಾಸ್ ಸರ್ಜರಿ, ಸ್ಟೆಂಟ್ ಅಳವಡಿಕೆ
  •  ಮಂಡಿ ಸಮಸ್ಯೆಗೆ ಕೃತಕ ಚಿಪ್ಪು ಅಳವಡಿಕೆ
  •  ಆಸ್ಪತ್ರೆಗೆ ಸೇರುವ ಮೊದಲು ಹಾಗೂ ನಂತರದ ವೆಚ್ಚ
  •  ವಾರ್ಡ್‌ಗಳಲ್ಲಿನ ಶುಶ್ರೂಷೆ ಶಸ್ತ್ರ ಚಿಕಿತ್ಸೆ, ರೋಗ ಪರೀಕ್ಷೆ
  •  ಶಸ್ತ್ರಚಿಕಿತ್ಸೆ ಸೇರಿ 1354 ಬಗೆಯ ವೈದ್ಯಕೀಯ
  • ಸೇವೆಗಳಿಗೆ ಆಯುಷ್ಮಾನ್ ಭಾರತ್ ಅನ್ವಯ
  •  50 ರೀತಿಯ ಕ್ಯಾನ್ಸರ್‌ಗಳಿಗೆ ಕೀಮೋಥೆರಪಿ ಚಿಕಿತ್ಸೆ

ಕರ್ನಾಟಕದ 1.21 ಕೋಟಿ ಕುಟುಂಬಗಳಿಗೆ ಆರೋಗ್ಯ ಭಾಗ್ಯ

      ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೊಜನೆಗಳನ್ನು ಆಯಾ ಹೆಸರಿನಲ್ಲೇ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎರಡೂ ಯೋಜನೆಗಳಡಿ ರಾಜ್ಯದ 1.21 ಕೋಟಿ ಕುಟುಂಬಗಳಿಗೆ ವೈದ್ಯಕೀಯ ಸೇವೆ ಸಿಗಲಿದೆ.

      ಕೇಂದ್ರ ಸರ್ಕಾರದ ಸಾಮಾಜಿಕ ಆರ್ಥಿಕ ಜನಗಣತಿ ಪ್ರಕಾರ ರಾಜ್ಯದ 62 ಲಕ್ಷ ಕುಟುಂಬಗಳು ರಾಷ್ಟ್ರಿಯ ಸ್ವಾಸ್ಥ್ಯ ಬಿಮಾ ಯೋಜನೆ (ಆರ್‌ಎಸ್‌ಬಿವೈ)ಗೆ ಒಳಪಡಲಿದ್ದು, ಆ ಕುಟುಂಬಕ್ಕೆ ಮಾತ್ರವೇ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಸಿಗಲಿದೆ. ಕೇಂದ್ರದ ಮಾನದಂಡಗಳಿಗೆ ಒಳಪಡದ 59 ಲಕ್ಷ ಕುಟುಂಬಗಳು ಆಯುಷ್ಮಾನ್ ಭಾರತ್ ಯೋಜನೆಯಿಂದ ವಂಚಿತವಾಗಲಿದ್ದು, ಈ ಕುಟುಂಬಗಳು ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಗೆ ಒಳಪಡಲಿವೆ.

      ಆಯುಷ್ಮಾನ್ ಭಾರತ್ ಎಂದೇ ಯೋಜನೆಯನ್ನು ಮುಂದುವರಿಸಲು ಬಹುತೇಕ ರಾಜ್ಯಗಳು ತಿರ್ಮಾನಿಸಿವೆ. ಆದರೆ ಕರ್ನಾಟಕದಲ್ಲಿ ಈ ಯೋಜನೆಯನ್ನು ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ಹೆಸರಿನಲ್ಲಿ ಮುಂದುವರಿಸಲು ರಾಜ್ಯ ಸರ್ಕಾರ ತಿರ್ಮಾನಿಸಿದೆ. ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ಯೋಜನೆಗೆ 920 ರು. ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

      ಕೇಂದ್ರದಿಂದ 62 ಲಕ್ಷ ಕುಟುಂಬಕ್ಕೆ ಸಿಗುವ ಶೇ.60 ರಷ್ಟು ಅನುದಾನದ ಮೊತ್ತ 300 ಕೋಟಿ ರು. ಆಗಲಿದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap