ಮುಂಬೈ
ಇಲ್ಲಿನ ಡೊಂಗ್ರಿ ಪ್ರದೇಶದಲ್ಲಿ ಮಂಗಳವಾರ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ.ಮೂಲಗಳ ಪ್ರಕಾರ, ಈವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.ಕುಸಿದ ‘ಕೇಸರಿಬಾಯಿ’ ಕಟ್ಟಡದ ಅವಶೇಷಗಳಿಂದ ಮಗು ಸೇರಿದಂತೆ ಐದು ಜನರನ್ನು ಈವರೆಗೆ ರಕ್ಷಿಸಲಾಗಿದೆ.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಸಂತ್ರಸ್ತರಿಗಾಗಿ ಇಮಾಮ್ವಾಡಾ ಮುನ್ಸಿಪಲ್ ಸೆಕೆಂಡರಿ ಬಾಲಕಿಯರ ಶಾಲೆಯಲ್ಲಿ ಆಶ್ರಯ ವ್ಯವಸ್ಥೆ ಮಾಡಿದೆ.ಘಟನೆ ಕುರಿತು ಬೇಸರ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು “ಮುಂಬೈನ ಡೊಂಗ್ರಿಯಲ್ಲಿ ಕಟ್ಟಡವೊಂದರ ಕುಸಿತ ದುಃಖ ಉಂಟು ಮಾಡಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಮಹಾರಾಷ್ಟ್ರ ಸರ್ಕಾರ, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.