ಮುಂಬೈ:
ಬಾಲಿವುಡ್-ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಶನಿವಾರ ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ದಕ್ಷಿಣ ಮುಂಬೈನ ಕೊಲಬಾದಲ್ಲಿರುವ ಎನ್ ಸಿಬಿ ಕಚೇರಿಗೆ ಆಗಮಿಸಿದ ದೀಪಿಕಾ ಪಡುಕೋಣೆ ಅವರನ್ನು ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಸಂಜೆ ಕಚೇರಿಯಿಂದ ನಟಿ ತೆರಳಿದರು ಎಂದು ಅವರು ಹೇಳಿದ್ದಾರೆ.ದೀಪಿಕಾ ತಮ್ಮ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜತೆಗೆ ಡ್ರಗ್ಸ್ ಬಗ್ಗೆ ನಡೆಸಿದ ವಾಟ್ಸ್ಆ್ಯಪ್ ಚಾಟ್ ಫೋಟೋ ವೈರಲ್ ಆಗಿತ್ತು. ಅದೇ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಎನ್‌ಸಿಬಿ ಸಮನ್ಸ್ ನೀಡಿತ್ತು. ಈಗಾಗಲೇ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟಿರುವ ಕರಿಷ್ಮಾ, ಡ್ರಗ್ಸ್ ಕುರಿತು ಚಾಟ್ ನಡೆದಿರುವ ವಾಟ್ಸ್ಆ್ಯಪ್ ಗ್ರೂಪ್ಗೆ ದೀಪಿಕಾ ಅವರೇ ಅಡ್ಮಿನ್ ಆಗಿದ್ದರು ಎಂಬ ವಿಷಯವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ದೀಪಿಕಾ ಪಡುಕೋಣೆ ತಾವು ಡ್ರಗ್ಸ್ಗೆ ಸಂಬಂಧಪಟ್ಟಂತೆ 2017ರಲ್ಲಿ ಕರಿಷ್ಮಾ ಜತೆಗೆ ಚಾಟ್ ಮಾಡಿರುವುದು ಸತ್ಯ. ಆದರೆ ತಾವು ಡ್ರಗ್ಸ್ ಸೇವಿಸಿಲ್ಲ ಎಂದು ಹೇಳಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.