ಶ್ರೀನಗರ
ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧದ ಕುರಿತು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನ ಇಂದಿನ ಸರ್ಕಾರಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರೊ. ಸೈಫುದ್ದೀನ್ ಸೋಜ್ ಶುಕ್ರವಾರ ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಮಾತುಕತೆಗೆ ಸೂಕ್ತ ವಾತಾವರಣ ಸೃಷ್ಟಿಸುವುದು ಪಾಕಿಸ್ತಾನದ ಕೈಯಲ್ಲೇ ಇದೆ ಎಂಬ ಸಚಿವ ವಿ.ಮುರಳೀಧರನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸೈಫುದ್ದೀನ್, ನೆರೆ ಹೊರೆಯ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧ ಹೊಂದುವ ಕುರಿತು ವಾಜಪೇಯಿ ಅವರು ಹೊಂದಿದ್ದ ಧೋರಣೆಯಿಂದ ಪ್ರಸಕ್ತ ಸರ್ಕಾರ ಭಾರಿ ದೂರ ಸಾಗಿರುವುದು ಸ್ಪಷ್ಟವಾಗುತ್ತಿದೆ ಎಂದರು.
ವಾಜಪೇಯಿ ಅವರು ನನಗೆ ಆತ್ಮೀಯರಾಗಿದ್ದರು. ಆರ್ ಎಸ್ ಎಸ್ ಕುಡಿಯಾಗಿದ್ದರೂ ನೆರೆಹೊರೆಯವರೊಂದಿಗಿನ ವ್ಯವಹಾರದ ಕುರಿತ ಅವರ ಧೋರಣೆ ವಿಭಿನ್ನ ಹಾಗೂ ಪರಿಣಾಮಕಾರಿಯಾಗಿತ್ತು ಎಂದರು. 1999ರ ಅಕ್ಟೋಬರ್ ನಲ್ಲಿ ಕಾರ್ಗಿಲ್ ಯುದ್ಧ ಸಮಾಪ್ತಿಯಾದ ನಂತರ ಕೂಡ ವಾಜಪೇಯಿ ಅವರು , ಪಾಕ್ ಪ್ರಧಾನಿ ನವಾಜ್ ಶರೀಫ್ ಅವರೊಂದಿಗೆ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದರು. ಅದೊಂದು ಐತಿಹಾಸಿಕ ನಿರ್ಧಾರವಾಗಿತ್ತು ಎಂದರು.
ವಾಜಪೇಯಿ ಅವರು ತಮ್ಮ ನೆರೆಯ ರಾಷ್ಟ್ರವನ್ನು ಬದಲಿಸಲಾಗದು. ಆದ್ದರಿಂದ ಅವರೊಂದಿಗೆ ಸೌಹಾರ್ದತೆಯಿಂದ ವ್ಯವಹರಿಸುವುದು ಅಗತ್ಯ ಎಂಬ ವಾಸ್ತವವನ್ನು ಅರಿತಿದ್ದರು. ಇಂದಿನ ಸರ್ಕಾರ ಅದನ್ನು ಅರಿಯಬೇಕಿದೆ ಎಂದರು. 2003ರ ಜೂನ್ 3ರಂದು ಲೋಕಸಭೆಯಲ್ಲಿ ಮಾತನಾಡಿದ್ದ ವಾಜಪೇಯಿ, ಪಾಕಿಸ್ತಾನದೊಂದಿಗಿನ ಸ್ನೇಹವನ್ನು ಕಾಯ್ದುಕೊಳ್ಳಬೇಕಿದೆ. ಏಕೆಂದರೆ, ಸ್ನೇಹಿತರು ಬದಲಾಗಬಹುದು, ಆದರೆ, ನೆರೆಹೊರೆಯವರು ಬದಲಾಗುವುದಿಲ್ಲ ಎಂದಿದ್ದರು.