ನಾಗ್ಪುರ :
ಕಳೆದ ತಿಂಗಳು ನಡೆದ ಎನ್ ಕೌಂಟರ್ ನಲ್ಲಿ ತಮ್ಮ ಇಬ್ಬರು ಸಹವರ್ತಿಗಳನ್ನು ಕೊಂದ ಹಿನ್ನೆಲೆಯಲ್ಲಿ ನಕ್ಸಲರು ಕೊನೆಯ ಹಂತದ ಚುನಾವಣೆ ನಡೆಯುವ ದಿನವಾದ ಮೇ 19ರಂದು ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ “ಬಂದ್’ ಗೆ ಕರೆನೀಡಿದ್ದಾರೆ.
ಬುಧವಾರ ರಾತ್ರಿ ಏತಪಳ್ಳಿ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ನಕ್ಸಲರು ಬಂದ್ ಕರೆಯ ಪೋಸ್ಟರ್ ಹಚ್ಚಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದ್ ಗೆ ಕರೆ ನೀಡಿರುವ ಪೋಸ್ಟರ್ ನಲ್ಲಿ ನಕ್ಸಲರು ತಮ್ಮ ಜೊತೆಗಾರರಾದ ಕಮಲಾ ನರೋಟೆ ಮತ್ತು ಶಿಲ್ಪಾ ದುರ್ವಾ ಅವರನ್ನು ಕಳೆದ ಎ.27 ರಂದು ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಗೈದಿರುವ ಕೃತ್ಯವು ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಆದುದರಿಂದ ಈ ಹತ್ಯೆಗಳ ಪ್ರತಿಭಟನಾರ್ಥ ಮೇ 19ರಂದು ಗಡ್‌ಚಿರೋಲಿಯಲ್ಲಿ ಬಂದ್ ನಡೆಸಬೇಕು ಎಂದು ನಕ್ಸಲರು ಕರೆ ನೀಡಿದ್ದಾರೆ.
ಗಂದರ್‌ವಾಹಿ ಅರಣ್ಯದಲ್ಲಿ ಸಿ-60 ಕಮಾಂಡೋಗಳು ನಕ್ಸಲ್ ಶೋಧ ಕಾರ್ಯ ನಡೆಸುತ್ತಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಹತರಾಗಿದ್ದ ಇಬ್ಬರು ಮಹಿಳಾ ನಕ್ಸಲರ ತಲೆಗೆ ಅನುಕ್ರಮವಾಗಿ 16 ಲಕ್ಷ ಮತ್ತು 4 ಲಕ್ಷ ರೂ.ಇನಾಮು ಘೋಷಿಸಲಾಗಿತ್ತು ಪೊಲೀಸರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








