ನವದೆಹಲಿ
ವಾಯುಮಾಲಿನ್ಯ ಮಟ್ಟವನ್ನು ತಗ್ಗಿಸುವ ಉದ್ದೇಶದಿಂದ 12 ದಿನಗಳ ಸಮ-ಬೆಸ ಸಂಖ್ಯೆ ವಾಹನಗಳ ಸಂಚಾರ ಯೋಜನೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಯಿತು.ಇಂದು ಆರಂಭವಾದ ಸಮ-ಬೆಸ ಸಂಖ್ಯೆ ಯೋಜನೆ ರಾಷ್ಟ್ರ ರಾಜಧಾನಿಯಲ್ಲಿ ನ 15 ರವರೆಗೆ ಜಾರಿಯಲ್ಲಿರುತ್ತದೆ.
ಈ ಯೋಜನೆಯಂತೆ ನೋಂದಣಿ ಸಂಖ್ಯೆಯಲ್ಲಿ ಬೆಸ ಕೊನೆಯ ಅಂಕಿಗಳನ್ನು ಹೊಂದಿರುವ ವಾಹನಗಳನ್ನು ನಗರ ರಸ್ತೆಗಳಲ್ಲಿ ಬೆಸ ದಿನಾಂಕಗಳಲ್ಲಿ ಅನುಮತಿಸಲಾಗುವುದು. ಅಂತೆಯೇ ನೋಂದಣಿ ಸಂಖ್ಯೆಯಲ್ಲಿ ಕೊನೆಯ ಸಮ ಅಂಕಿ ಹೊಂದಿರುವ ವಾಹನಗಳನ್ನು ಸಮ ಸಂಖ್ಯೆ ಹೊಂದಿರುವ ದಿನಾಂಕಗಳಲ್ಲಿ ಅನುಮತಿಸಲಾಗುತ್ತದೆ.
ಈ ಯೋಜನೆ ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10ರವರೆಗೆ ಅನ್ವಯಿಸುತ್ತದೆ. ಸಮ-ಬೆಸ ಸಂಖ್ಯೆ ಯೋಜನೆ ಉಲ್ಲಂಘಿಸಿದರೆ 4,000 ರೂ. ದಂಡ ತೆರಬೇಕಾಗುತ್ತದೆ. ಇತರ ರಾಜ್ಯಗಳಿಂದ ಬರುವ ವಾಹನಗಳಿಗೂ ಈ ಯೋಜನೆ ಅನ್ವಯಿಸುತ್ತದೆ. ಆದರೆ, ದ್ವಿಚಕ್ರ ವಾಹನಗಳಿಗೆ ವಿನಾಯಿತಿ ಇದರಿಂದ ನೀಡಲಾಗಿದೆ.ದೆಹಲಿ ಮುಖ್ಯಮಂತ್ರಿ ಮತ್ತು ಸಚಿವರಿಗೂ ಯೋಜನೆ ಅನ್ವಯಿಸುತ್ತದೆ.
ಆದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್, ಕೇಂದ್ರ ಸಚಿವರು, ರಾಜ್ಯಸಭೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರು, ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, , ಯುಪಿಎಸ್‍ಸಿ ಅಧ್ಯಕ್ಷರು, ಮುಖ್ಯ ಚುನಾವಣಾ ಆಯುಕ್ತರು, ಚುನಾವಣಾ ಆಯುಕ್ತರು, ಮಹಾಲೇಖಪಾಲರು, ರಾಜ್ಯಸಭೆ ಉಪಸಭಾಪತಿ, ಲೋಕಸಭೆ ಉಪಾಧ್ಯಕ್ಷರು, ದೆಹಲಿಯ ಲೆಫ್ಟಿನೆಂಟ್ ಗವರ್ನರ್,ದೆಹಲಿ ಹೈಕೋರ್ಟ್ ನ್ಯಾಯಾಧೀಶರು, ಲೋಕಾಯುಕ್ತರು ಮತ್ತು ತುರ್ತು ಸೇವೆಗಳ ನ್ಯಾಯಾಧೀಶರ ವಾಹನಗಳಿಗೆ ಬೆಸ-ಸಮ ಯೋಜನೆಯಿಂದ ವಿನಾಯಿತಿ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ