ಕೋಲ್ಕತಾ:
ಕೇಂದ್ರ ಸರ್ಕಾರದ ಪರಿಚಯಿಸಿದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ವಿರುದ್ಧ ಪ.ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅಲ್ಲದೆ ಸಿಎಎ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಂತೆ ಈಶಾನ್ಯ ರಾಜ್ಯಗಳಿಗೆ ಮತ್ತು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ದೀದಿ ಕರೆ ನೀಡಿದ್ದಾರೆ.
ಎನ್ ಪಿಆರ್ ಜಾರಿಗೊಳಿಸುವ ಮುನ್ನ ಆ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸುವಂತೆ ಮತ್ತು ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸುವಂತೆ ಈಶಾನ್ಯ ರಾಜ್ಯಗಳಿಗೆ ಮತ್ತು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಬಿಜೆಪಿ ನಾಯಕರು ಸೊಕ್ಕಿನವರು ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ಅಹಂಕಾರದಿಂದ ಮಾತನಾಡುವ ಬಿಜೆಪಿ ನಾಯಕರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರಿಗೆ ನಾಚಿಕೆಯಾಗಬೇಕು. ಅಪಾಯವನ್ನು ಅರಿತು ಜನ ದೇಶಾದ್ಯಂತ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.ಸಿಎಎ ವಿರುದ್ಧ ನಾವು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುತ್ತೇವೆ. ಇದಕ್ಕೆ ಎಲ್ಲಾ ಪ್ರತಿಪಕ್ಷಗಳು ಒಪ್ಪುವದಾದರೆ ಕೋಲ್ಕತಾದಲ್ಲಿ ಸಭೆ ಸೇರಲಾಗುವುದು. ಕೇಂದ್ರ ಸರ್ಕಾರ ಎನ್ ಪಿಆರ್ ಜಾರಿಗೆ ಸಂಬಂಧಿಸಿದಂತೆ ವಿಧಿಸಿರುವ ಷರತ್ತುಗಳನ್ನು ತೆಗೆಯಬೇಕು ಎಂದು ದೀದಿ ಒತ್ತಾಯಿಸಿದರು.
