ಪವನ್ ವರ್ಮಾ ಯಾವ ಪಕ್ಷಕ್ಕೆ ಬೇಕಾದರು ಹೋಗಬಹುದು : ನಿತೀಶ್ ಕುಮಾರ್

ಪಾಟ್ನಾ:

    ಸದ್ಯ ದೇಶದಲ್ಲಿ ತೀವ್ರ ಕುತೂಹಲಕ್ಕ ಕಾರಣವಾಗಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ  ಸಂಯುಕ್ತ ಜನತಾದಳ  ಬಿಜೆಪಿಯೊಂದಿಗೆ ಕೈಜೋಡಿಸಿರುವುದನ್ನು ಬಹಿರಂಗವಾಗಿ ಪ್ರಶ್ನೆ ಮಾಡಿದ ಪಕ್ಷದ ನಾಯಕ ಪವನ್ ವರ್ಮಾ ಅವರ ವಿರುದ್ಧ ಬಿಹಾರ ಮುಖ್ಯಮಂತ್ರಿ ಹಾಗು ಜೆಡಿಯು ಮುಖಂಡರಾದ ನಿತೀಶ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪವನ್ ವರ್ಮಾ ಅವರು ಜೆಡಿ(ಯು) ಬಿಟ್ಟು ಯಾವ ಪಕ್ಷಕ್ಕೆ ಬೇಕಾದರು ಹೋಗಬಹುದು ಎಂದಿದ್ದಾರೆ.

    ಜೆಡಿಯು ಪ್ರಧಾನ ಕಾರ್ಯದರ್ಶಿಯಾಗಿರುವ ಪವನ್ ವರ್ಮಾ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಿತೀಶ್ ಕುಮಾರ್, ಅವರೊಬ್ಬ ಅನುಭವಿ ವ್ಯಕ್ತಿ, ಅವರಿಗೆ ನನ್ನ ಬಗ್ಗೆ ಗೌರವ ಇಲ್ಲದಿದ್ದರೂ ನನಗೆ ಅವರ ಮೇಲೆ ಗೌರವವಿದೆ. ಆದರೆ ಇಂತಹ ವೈಯಕ್ತಿಕ ವಿಷಯಗಳನ್ನೆಲ್ಲ ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಸಾರ್ವಜನಿಕವಾಗಿ ಹೇಳುವುದು ಸರಿಯೇ? ಅವರು ನನಗೆ ಹೇಳಿದ್ದನ್ನು ನಾನು ಬಹಿರಂಗವಾಗಿ ಮುಕ್ತವಾಗಿ ಹೇಳಿದರೆ ಏನಾಗುತ್ತದೆ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದರು.

   ಜೆಡಿಯು ಮತ್ತು ಬಿಜೆಪಿ ಹೊಂದಾಣಿಕೆ ಬಗ್ಗೆ ತಾತ್ವಿಕ ಸ್ಪಷ್ಟತೆ ನೀಡಿ ಎಂದು ಕೇಳಿದ ಪವನ್ ವರ್ಮಾ ಅವರಿಗೆ ನಿತೀಶ್ ಕುಮಾರ್ ಜೆಡಿಯುನ ನಿಲುವು ಸ್ಪಷ್ಟವಾಗಿದೆ. ಅವರಿಗೆ ಬೇಕಾದಲ್ಲಿಗೆ ಅವರು ಹೋಗಬಹುದು ಎಂದರು.ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿಷಯವಾಗಿ ಬಿಜೆಪಿ ವಿರುದ್ಧ ಜೆಡಿ(ಯು) ನಾಯಕ ಪ್ರಶಾಂತ್ ಕಿಶೋರ್ ಅನೇಕ ಬಾರಿ ಟೀಕಿಸಿದ್ದಾರೆ. ಹೀಗಿರುವಾಗ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರ ನಿಲುವೇನು ಎಂದು ಪವನ್ ವರ್ಮಾ ಕೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ